ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಮರಿತಿಬ್ಬೇಗೌಡರು ರಾಜಕೀಯವಾಗಿ ಬೇಗನೆ ತೀರ್ಮಾನಕ್ಕೆ ಬರಲಿ: ಮಧು ಮಾದೇಗೌಡ

Last Updated 16 ಜೂನ್ 2022, 15:38 IST
ಅಕ್ಷರ ಗಾತ್ರ

ಮೈಸೂರು: ‘ಸದ್ಯ ಜೆಡಿಎಸ್‌ನಲ್ಲಿರುವ ಮರಿತಿಬ್ಬೇಗೌಡ ಅವರು ರಾಜಕೀಯವಾಗಿ ಬೇಗನೆ ಒಂದು ತೀರ್ಮಾನಕ್ಕೆ ಬರಬೇಕು’ ಎಂದು ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್‌ನ ಮಧು ಮಾದೇಗೌಡ ಕೋರಿದರು.

ನಗರದ ವಿ.ವಿ. ಮೊಹಲ್ಲಾದ ಕೆ.ಎಚ್‌. ರಾಮಯ್ಯ ಹಾಸ್ಟೆಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹಾಗೂ ಮುಖಂಡ ಕೀಲಾರ ಜಯರಾಂ ಅವರೊಂದಿಗೆ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಇವತ್ತಿನ ರಾಜಕೀಯ ರಂಗ ಹೊಲಸಾಗಿದೆ. ನನ್ನ ಚುನಾವಣೆಯಲ್ಲೇ ಏನಾಗಿದೆ ಎಂಬುದನ್ನು ನೋಡಿದ್ದೀರಿ. ನಮ್ಮ ಸ್ನೇಹಿತರು ಶಿಕ್ಷಕರಿಗೆ ತಲಾ ಒಂದು ಸಾವಿರ ರೂಪಾಯಿ ನೀಡಿ ಮುಂದೆ ಹೋಗಿದ್ದಾರೆ. ಹೀಗಾಗಿ, ಮರಿತಿಬ್ಬೇಗೌಡರು ಮುಂದೆ ಸ್ಪರ್ಧಿಸುವುದು ಶಿಕ್ಷಕರ ಕ್ಷೇತ್ರವೋ, ವಿಧಾನಸಭೆಗೋ, ಲೋಕಸಭೆಗೋ ಎನ್ನುವುದನ್ನು ನಿರ್ಧರಿಸಬೇಕು. ನಾನು ಅವರೊಂದಿಗೆ ಪ್ರಾಮಾಣಿಕವಾಗಿ ಇರುತ್ತೇನೆ’ ಎಂದರು.‌

‘ಮರಿತಿಬ್ಬೇಗೌಡ ಹಾಗೂ ಕೀಲಾರ ಜಯರಾಂ ನಮ್ಮ ಜೊತೆಗಿದ್ದಿದ್ದರಿಂದ ಮೊದಲನೇ ಪ್ರಾಶಸ್ತ್ಯದ ಮತಗಳಿಂದಲೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿತ್ತು’ ಎಂದು ತಿಳಿಸಿದರು.

‘ನೀವೂ ಸ್ಪರ್ಧಿಸಿ, ನಾನೂ ಸ್ಪರ್ಧಿಸುತ್ತೇನೆ. ಯಾರಿಗೆ ಭಾಗ್ಯವಿದೆಯೋ ಅವರು ಆಯ್ಕೆಯಾಗೋಣ ಎಂದು ಜಯರಾಂ ಅವರಿಗೆ ಹಲವು ಬಾರಿ ಹೇಳಿದ್ದೆ. 18 ವರ್ಷಗಳ ರಾಜಕಾರಣದಲ್ಲಿ ಬೆಂದು–ನೊಂದು ಈಗ ಸ್ಥಾನ ಪಡೆದಿದ್ದೇನೆ. ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದೂ ಇದೆ. ಈಗ ಪಕ್ಷದ ನಾಯಕರ ಒತ್ತಾಯದಿಂದ ಸ್ಪರ್ಧಿಸಿದ್ದೆ’ ಎಂದರು.

‘ಮರಿತಿಬ್ಬೇಗೌಡರನ್ನು ಗುರುವೆಂದು ಭಾವಿಸಿದ್ದೇವೆ. ನನಗೆ ಸರಿಯಾದ ಪಾಠ ಮಾಡದಿದ್ದರೆ ತಪ್ಪು ಅವರದ್ದೇ ಆಗುತ್ತದೆ’ ಎಂದು ಹೇಳಿದರು.

‘ಈ ಹಾಸ್ಟೆಲ್‌ನಲ್ಲಿ ಒಂದಿಬ್ಬರು ಬಡ ವಿದ್ಯಾರ್ಥಿಗಳ ಶುಲ್ಕವನ್ನು ಪ್ರತಿ ವರ್ಷ ಭರಿಸುತ್ತೇನೆ’ ಎಂದು ತಿಳಿಸಿದರು.

ಹಾಸ್ಟೆಲ್‌ನ ಧರ್ಮದರ್ಶಿ ಕೆ.ಟಿ. ಕೃಷ್ಣಪ್ಪ, ಮುಖಂಡರಾದ ಡಾ.ಬಿ.ಟಿ. ರಘು, ಪ್ರೊ.ಶಂಕರೇಗೌಡ, ಡಾ.ವೈ.ಪಿ. ಚಂದ್ರಶೇಖರ, ಡಾ.ಶಿವಲಿಂಗೇಗೌಡ, ಲಿಂಗರಾಜು, ಮನು, ಯೋಗೀಶ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT