‘ಕೈ ನಾರಿ ಶಕ್ತಿ’ ಪ್ರದರ್ಶನ: ಅರಮನೆ ಆವರಣದಲ್ಲಿ ಮಹಿಳೆಯರದ್ದೆ ಪಾರುಪತ್ಯ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರ ಮತ ಸೆಳೆಯುವುದಕ್ಕಾಗಿ ಕೆಪಿಸಿಸಿ ವತಿಯಿಂದ ನಗರದ ಬೆಂಗಳೂರು ಅರಮನೆ ಆವರಣದಲ್ಲಿ ಸೋಮವಾರ ನಡೆದ ‘ನಾ ನಾಯಕಿ’ ಸಮಾವೇಶದ ವೇದಿಕೆಯನ್ನು ಸಂಪೂರ್ಣವಾಗಿ ಸ್ತ್ರೀಯರಿಗೆ ಮೀಸಲಿಡಲಾಗಿತ್ತು. ನಾಯಕರನ್ನು ವೇದಿಕೆ ಎದುರಿನ ಆಸನಗಳಿಗೆ ಸೀಮಿತಗೊಳಿಸಲಾಗಿತ್ತು.
ಶಾಸಕಿಯರು, ಮಾಜಿ ಸಂಸದೆಯರು, ಮಾಜಿ ಸಚಿವೆಯರು, ಮಾಜಿ ಶಾಸಕಿಯರು, ವಿವಿಧ ಮುಂಚೂಣಿ ಘಟಕಗಳಲ್ಲಿ ಪದಾಧಿಕಾರಿಗಳಾಗಿರುವ ಮಹಿಳೆಯರು, ಯುವ ಕಾಂಗ್ರೆಸ್ ನಾಯಕಿಯರು ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮಾಜಿ ಸಚಿವೆ ಉಮಾಶ್ರೀ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ನೆಟ್ಟಾ ಡಿಸೋಜ, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುಷ್ಪಾ ಅಮರನಾಥ್, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್, ಕನೀಝ್ ಫಾತಿಮಾ, ಕುಸುಮಾ ಶಿವಳ್ಳಿ, ಸೌಮ್ಯಾ ರೆಡ್ಡಿ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಮಾಜಿ ಸಚಿವೆಯರಾದ ರಾಣಿ ಸತೀಶ್, ಮೋಟಮ್ಮ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ವೇದಿಕೆಯಲ್ಲಿದ್ದ ಮಹಿಳೆಯರೆಲ್ಲರಿಗೂ ತಲಾ ಮೂರರಿಂದ ಐದು ನಿಮಿಷ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಮಾವೇಶದ ಉದ್ಘಾಟನೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ ಸೇರಿದಂತೆ ಕೆಲವು ನಾಯಕರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಉದ್ಘಾಟನೆ ಮುಗಿದ ತಕ್ಷಣ ಎಲ್ಲರೂ ವೇದಿಕೆ ಮುಂಭಾಗದ ಆಸನಗಳಿಗೆ ಮರಳಿದರು.
‘ಬಿಜೆಪಿ ಮಹಿಳಾ ವಿರೋಧಿ’: ಸುರ್ಜೇವಾಲಾ ಮಾತನಾಡಿ, ‘ಬಿಜೆಪಿ ಮಹಿಳೆಯರ ವಿರೋಧಿ ಪಕ್ಷ. ಕರ್ನಾಟಕದಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆ ಮಹಿಳೆಯರಿಗೆ ಸಂಬಂಧಿಸಿದಂತೆ 21 ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಒಂದನ್ನೂ ಈಡೇರಿಸಿಲ್ಲ’ ಎಂದರು.
ಉಮಾಶ್ರೀ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳನ್ನು ಕಿತ್ತೊಗೆಯಲು ಈ ಸಮಾವೇಶ ಪ್ರೇರಣೆಯಾಗಲಿದೆ. ಎಲ್ಲ ಹಂತದಲ್ಲೂ ಮಹಿಳೆಯರು ಬಿಜೆಪಿ ಸರ್ಕಾರಗಳ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕು’ ಎಂದು ಹೇಳಿದರು.
ಪ್ರತಿಜ್ಞೆ: ಪಕ್ಷದ ತತ್ವ, ಸಿದ್ಧಾಂತ ಮತ್ತು ಮೌಲ್ಯಗಳ ಅನುಸಾರ ಪ್ರತಿ ಗ್ರಾಮ, ನಗರ, ಪಟ್ಟಣಗಳಲ್ಲಿ ನಾಯಕಿಯರಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಪ್ರತಿಜ್ಞೆ ಸ್ವೀಕರಿಸಿದರು. ಸೌಮ್ಯಾ ರೆಡ್ಡಿ ಪ್ರತಿಜ್ಞೆ ಬೋಧಿಸಿದರು.
ಹರಿದು ಬಂದ ಮಹಿಳೆಯರ ದಂಡು
ಬೆಂಗಳೂರು ಅರಮನೆ ಆವರಣದಲ್ಲಿರುವ ಒಳಾಂಗಣ ಸಭಾಂಗಣದಲ್ಲಿ ‘ನಾ ನಾಯಕಿ’ ಸಮಾವೇಶ ಆಯೋಜಿಸಲಾಗಿತ್ತು. ಆದರೆ, ಅಲ್ಲಿರುವ ಆಸನಗಳ ಸಂಖ್ಯೆಗೆ ಹೋಲಿಸಿದರೆ ಅದರ ಹಲವು ಪಟ್ಟು ಮಹಿಳೆಯರು ಸಮಾವೇಶಕ್ಕೆ ಬಂದಿದ್ದರು. ಇದರಿಂದಾಗಿ ದೊಡ್ಡ ಸಂಖ್ಯೆಯ ಮಹಿಳೆಯರು ಸಭಾಂಗಣದ ಹೊರಗೆ ನಿಂತೇ ಭಾಷಣ ಆಲಿಸುವಂತಾಗಿತ್ತು.
ರಾಜ್ಯದ ವಿವಿಧೆಡೆಯಿಂದ ಮಹಿಳೆಯರು ಸಮಾವೇಶಕ್ಕೆ ಬಂದಿದ್ದರು. ಸಭಾಂಗಣದ ಸುತ್ತ ಮುತ್ತಲಿನ ಪ್ರದೇಶ ಮಹಿಳೆಯರಿಂದ ಕಿಕ್ಕಿರಿದು ತುಂಬಿತ್ತು. ದೂರದ ಊರುಗಳಿಂದ ಹೊರಟಿದ್ದ ಮಹಿಳೆಯರು ಸಮಾವೇಶದ ಕೊನೆಯವರೆಗೂ ಕಾರ್ಯಕ್ರಮದ ಸ್ಥಳಕ್ಕೆ ಬರುತ್ತಲೇ ಇದ್ದರು.
ಬಂಜಾರಾ ಶಾಲು, ಮುತ್ತಿನ ಸರದ ಉಡುಗೊರೆ
‘ನಾ ನಾಯಕಿ’ ಸಮಾವೇಶಕ್ಕೆ ಬಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಮಾಜಿ ಶಾಸಕಿ ಜಲಜಾ ನಾಯಕ್ ಅವರು ಬಂಜಾರಾ ಶೈಲಿಯ ಶಾಲು ಹೊದಿಸಿ ಗೌರವಿಸಿದರು. ಮಾಜಿ ಸಚಿವೆ ಮೋಟಮ್ಮ ಅವರು ಮುತ್ತಿನ ಸರವೊಂದನ್ನು ಪ್ರಿಯಾಂಕಾ ಕೊರಳಿಗೆ ತೊಡಿಸಿದರು.
ವೇದಿಕೆಗೆ ತಲುಪುವ ಮುನ್ನ ಪ್ರಿಯಾಂಕಾ ಅವರು ಮಹಿಳೆಯರ ಬಳಿ ತೆರಳಿ ಹಸ್ತಲಾಘವ ನೀಡಿದರು. ಹಲವು ಮಹಿಳೆಯರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
***
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಕಲ್ಪಿಸುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸುತ್ತೇನೆ.
–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ
**
ಕೆಳ ಹಂತದಿಂದ ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿ ಕಲಿಸಿದರೆ ಮಾತ್ರ ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ಸಾಮರ್ಥ್ಯ ಗಳಿಸಿಕೊಳ್ಳಲು ಸಮಾವೇಶ ಆಯೋಜಿಸಲಾಗಿದೆ.
–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
**
ರಾಜ್ಯದ ಮೂಲೆ ಮೂಲೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತೆಯರೆಲ್ಲರೂ ನಾಯಕಿಯರಾಗಿ ಹೊರಹೊಮ್ಮಬೇಕು. ಆ ಮೂಲಕ ರಾಜ್ಯದಲ್ಲಿ ಮಹಿಳಾ ನಾಯಕತ್ವವನ್ನು ಯಶಸ್ವಿಗೊಳಿಸಬೇಕು.
–ನೆಟ್ಟಾ ಡಿಸೋಜ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.