ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ: ಜ.9ರಿಂದ ಕಾಂಗ್ರೆಸ್‌ ಪಾದಯಾತ್ರೆ

ತಲಕಾವೇರಿಯಲ್ಲಿ ಮಹಾಸಂಕಲ್ಪ ಪೂಜೆ
Last Updated 24 ಡಿಸೆಂಬರ್ 2021, 13:46 IST
ಅಕ್ಷರ ಗಾತ್ರ

ಮಡಿಕೇರಿ: ‘ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಜ.9ರಿಂದ 19ರವರೆಗೆ, ಅಣೆಕಟ್ಟು ನಿರ್ಮಾಣವಾಗುವ ಪ್ರದೇಶದಿಂದ ಬೆಂಗಳೂರುವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಪಾದಯಾತ್ರೆ ಯಶಸ್ಸಿಗಾಗಿ ಪ್ರಾರ್ಥಿಸಿ, ಕಾವೇರಿ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಶುಕ್ರವಾರ ಮಹಾಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಪಕ್ಷಾತೀತ ಹೋರಾಟ. ಸಂಘ–ಸಂಸ್ಥೆಗಳ ಮುಖಂಡರೂ ಪಾಲ್ಗೊಳ್ಳಬಹುದು. ಪ್ರತಿದಿನ 15 ಕಿ.ಮೀ ಸಾಗುವ ಪಾದಯಾತ್ರೆಯು ದಾಖಲೆ ನಿರ್ಮಿಸಲಿದೆ. ಮೇಕೆದಾಟು ನಮ್ಮ ಹಕ್ಕು. ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಪಾದಿಸಿದರು.

‘ಪಾದಯಾತ್ರೆಗೆ ಕಾವೇರಿ ಮೂಲ ಸ್ಥಳದಿಂದಲೇ ಚಾಲನೆ ನೀಡಲಾಗಿದೆ. ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಸಿಗಬೇಕಾಗಿದೆ. ಯಾವ ನ್ಯಾಯಾಲಯದಲ್ಲೂ ತಮಿಳುನಾಡು ಆಕ್ಷೇಪಣಾ ಅರ್ಜಿ ಸಲ್ಲಿಸಿಲ್ಲ. ಯೋಜನೆಯು ಕಾರ್ಯಗತವಾದರೆ ಕಷ್ಟಕಾಲದಲ್ಲಿ ನೀರು ಬಳಸಬಹುದು’ ಎಂದರು.

‘ಕಳೆದ ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರಿದ್ದ 64 ಟಿಎಂಸಿ ನೀರು ಮೇಕೆದಾಟುವಿನಲ್ಲಿ ಸಂಗ್ರಹವಾಗಿದ್ದರೆ ರಾಜ್ಯದ ಏಳು ಜಿಲ್ಲೆಗಳಿಗೆ ಪ್ರಯೋಜನವಾಗುತ್ತಿತ್ತು. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯೂ ನೀಗುತ್ತಿತ್ತು’ ಎಂದು ತಿಳಿಸಿದರು.

‘ಯೋಜನೆಗೆ ಅಗತ್ಯವಿರುವ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿ ಮುಳುಗಡೆಯಾಗದು. ಅರಣ್ಯ ಭೂಮಿ ಮಾತ್ರ ಮುಳುಗಡೆಯಾಗಲಿದೆ. ನೀರು ಬಳಕೆ ವಿಚಾರವು ಅಂತಮಗೊಂಡಿರುವುದರಿಂದ ಯೋಜನೆಯು ಬಹುಬೇಗ ಕಾರ್ಯಗತಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಬಂಧಿಯೊಬ್ಬರ ಸಾವಿನ ಸೂತಕವಿದ್ದ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಅವರು ಉಗಮ ಸ್ಥಳವಾದ ಪವಿತ್ರ ಕುಂಡಿಕೆಯ ಬಳಿಗೆ ಬಾರದೆ ಸ್ನಾನಕೊಳದ ಮೆಟ್ಟಿಲ ಬಳಿಯೇ ಕುಳಿತು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT