ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ ಹತ್ತಿಕ್ಕಲು ಕರ್ಫ್ಯೂ: ಸಂಸದ ಡಿ.ಕೆ. ಸುರೇಶ್ ಆರೋಪ

Last Updated 5 ಜನವರಿ 2022, 18:37 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯ ಬಿಜೆಪಿ ಸರ್ಕಾರ ಮೇಕೆದಾಟು ಪಾದಯಾತ್ರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಯಾರು ಏನೇ ನಿರ್ಬಂಧ ಹೇರಿದರೂ ಪಾದಯಾತ್ರೆ ನಡೆದೇ ನಡೆಯುತ್ತದೆ’ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

ಕನಕಪುರದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಸದ್ಯ ನೀಡುತ್ತಿರುವ ಕೋವಿಡ್ ಅಂಕಿ– ಅಂಶಗಳು ಅನುಮಾನ ಮೂಡಿಸು ವಂತಿವೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಉದ್ದೇಶಪೂರ್ವಕವಾಗಿ ಹೆಚ್ಚು ಪ್ರಕರಣ ತೋರಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಸದ್ಯ ಸರ್ಕಾರ ಹೇರಿರುವುದು ಕೊರೊನಾ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ. ಈ ದೇಶದಲ್ಲಿ, ರಾಜ್ಯದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಆಗ ಕಾಣದ ಕೊರೊನಾ ನಮ್ಮ ಪಾದಯಾತ್ರೆ ಸಮಯದಲ್ಲಿ ಹೇಗೆ ಕಂಡಿತೋ ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ನೀರಿಗಾಗಿ ನಡಿಗೆ ಹಮ್ಮಿಕೊಂಡಿದ್ದೇವೆ. ಇದು ಜನರಿಗಾಗಿ ಮಾಡುತ್ತಿರುವ ಹೋರಾಟ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿಜವಾಗಿ ಜನರ ಕಾಳಜಿ ಇದ್ದಲ್ಲಿ ಕೂಡಲೇ ಯೋಜನೆಗೆ ಚಾಲನೆ ನೀಡಲಿ’ಎಂದರು.

ಪಾದಯಾತ್ರೆ ಮಾರ್ಗ ಪರಿಷ್ಕರಣೆ ಕುರಿತು ಮಾತನಾಡಿ, ‘ಈ ಬಗ್ಗೆ ನಮ್ಮ ಪಕ್ಷದ ನಾಯಕರು ತೀರ್ಮಾನಿಸುತ್ತಾರೆ. ರಾಮನಗರ ಜಿಲ್ಲೆಯಲ್ಲಿ ಸದ್ಯ ಕೊರೊನಾ ಕೇಸ್‌ಗಳು ಹೆಚ್ಚು ಇಲ್ಲ. ಮತ್ತೆಲ್ಲಿ ಜಾಸ್ತಿ ಇದೆಯೋ ಗೊತ್ತಿಲ್ಲ’ ಎಂದರು.

ಪಾದಯಾತ್ರೆ ಮಾಡಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿರುವ ಬಗ್ಗೆ ಮಾತನಾಡಿ, ‘ಕೇಸ್‌ಗಳಿಗೆಲ್ಲ ಹೆದರಿಕೊಂಡು ರಾಜಕಾರಣ ಮಾಡಲು ಆಗದು. ಹೋರಾಟ ಮಾಡಬೇಕಾದರೆ ಕೇಸು, ಜೈಲು ಎಲ್ಲ ಮಾಮೂಲಿ. ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಸರ್ಕಾರ ಮೇಕೆದಾಟು ಪಾದಯಾತ್ರೆ ತಡೆದರೆ ಜೈಲ್‌ ಭರೋ ಕಾರ್ಯಕ್ರಮ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಪಾದಯಾತ್ರೆಗೆ ಎಚ್‌.ಡಿ. ಕುಮಾರಸ್ವಾಮಿ ವಿರೋಧ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರೆಲ್ಲ ದೊಡ್ಡವರು. ಅವರು ಮಾಡಿದರೆ ಪಾದಯಾತ್ರೆ, ನಾವು ಮಾಡಿದರೆ ರಾಜಕಾರಣ. ಸಮಯವೇ ಎಲ್ಲವನ್ನೂ ತೀರ್ಮಾನ ಮಾಡುತ್ತದೆ’ ಎಂದರು.

ರಾಮನಗರದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಮಾತನಾಡಿದ ಸುರೇಶ್ ‘ಬಡವರ ಮೇಲೆ ಯಾಕೆ ಕೇಸ್ ಹಾಕುತ್ತಾರೆ. ನನ್ನ ಮೇಲೆ ಹಾಕಲು ಹೇಳಿ. ರಾಮನಗರದಲ್ಲಿ ಯಾರಿದ್ದೀರಿ ಗಂಡಸು ಅಂತ ಕರೆದ ಮೇಲೆ ಈ ಭಾಗದ ಜನಪ್ರತಿನಿಧಿಯಾಗಿ ಕೇಳಬೇಕು ಅಲ್ಲವಾ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT