ಭಾನುವಾರ, ಮಾರ್ಚ್ 7, 2021
31 °C
ಕಾಂಗ್ರೆಸ್‌ನಿಂದ ರಾಜಭವನ ಚಲೋ’ ಅರ್ಧದಲ್ಲೇ ತಡೆದ ಪೊಲೀಸರು

ರೈತಪರ ‘ಕೈ’ ನಾಯಕರ ಕಹಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕಲು ಪ‍ಕ್ಷದ ನೂರಾರು ಕಾರ್ಯಕರ್ತರು ಮತ್ತು ರೈತರ ಜೊತೆ ಬುಧವಾರ ಮಧ್ಯಾಹ್ನ ಹೊರಟ ಕಾಂಗ್ರೆಸ್ ನಾಯಕರನ್ನು ಮಹಾರಾಣಿ ಕಾಲೇಜು ಬಳಿ ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ, ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರು, ಮುಖಂಡರ ನಡುವೆ ನೂಕಾಟ, ತಳ್ಳಾಟ, ತೀವ್ರ ಮಾತಿನ ಚಕಮಕಿ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ಎಸ್‌.ಆರ್‌. ಪಾಟೀಲ, ಸಲೀಂ ಅಹ್ಮದ್‌ ಸೇರಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕರೆದೊಯ್ದರು.

ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ ಅಳವಡಿಸಿ ತಡೆದ ಪೊಲೀಸರ ಜೊತೆ ಶಾಸಕಿಯರಾದ ಅಂಜಲಿ ನಿಂಬಾಳ್ಕರ್‌ ಮತ್ತು ಸೌಮ್ಯಾ ರೆಡ್ಡಿ ವಾಗ್ವಾದಕ್ಕಿಳಿದರು. ಅಸ್ವಸ್ಥಗೊಂಡ ಅಂಜಲಿ ನಿಂಬಾಳ್ಕರ್‌ ಅವರನ್ನು ಪೊಲೀಸರೇ ಉಪಚರಿಸಿದರು. ಇದೇ ವೇಳೆ, ಮಹಿಳಾ ಕಾನ್‌ಸ್ಟೆಬಲ್‌ ಮತ್ತು ಸೌಮ್ಯಾರೆಡ್ಡಿ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಪೊಲೀಸರು ಅನಗತ್ಯವಾಗಿ ಬಲ ಪ್ರಯೋಗಿಸುತ್ತಿದ್ದಾರೆಂದು ಸೌಮ್ಯಾ ರೆಡ್ಡಿ ಆಕ್ಷೇಪಿಸಿದರು. ಈ ವೇಳೆ, ಮಹಿಳಾ ಕಾನ್‌ಸ್ಟೆಬಲ್ ಮೇಲೆ ಶಾಸಕಿ ಹಲ್ಲೆಗೂ ಯತ್ನಿಸಿದರು ಎಂದೂ ಹೇಳಲಾಗಿದೆ. ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಸ್ಥಳದಲ್ಲಿದ್ದ ಡಿ.ಕೆ. ಶಿವಕುಮಾರ್‌ ಬಳಿ ಸೌಮ್ಯಾ ರೆಡ್ಡಿ ದೂರಿದರು.

ಅದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಕಾಂಗ್ರೆಸ್ ಕಾರ್ಯಕರ್ತರು, ಟ್ರ್ಯಾಕ್ಟರ್‌ಗಳಲ್ಲಿ ಬಂದಿಳಿದ ರೈತರ ಜೊತೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಎಚ್.ಕೆ ಪಾಟೀಲ ಹಾಗೂ ಇತರ ನಾಯಕರು ಹಸಿರು ಶಾಲು ಧರಿಸಿ, ಪಕ್ಷದ ಧ್ವಜ ಹಿಡಿದು ಸ್ವಾತಂತ್ರ್ಯ ಉದ್ಯಾನವನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಡೊಳ್ಳು ಕುಣಿತ ಸೇರಿದಂತೆ ಜಾನಪದ ತಂಡಗಳಿಂದ ಪ್ರತಿಭಟನೆಗೆ ಇನ್ನಷ್ಟು ಕಾವು, ಮೆರುಗು ಸಿಕ್ಕಿತು.

ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಕಡೆಗಳಿಂದ ಮಂಗಳವಾರ ರಾತ್ರಿ ಬೆಂಗಳೂರಿಗೆ ಹೊರಟ್ಟಿದ್ದ ಪಕ್ಷದ ಕಾರ್ಯಕರ್ತರು ಮತ್ತು ರೈತರನ್ನು ಹೆದ್ದಾರಿಯಲ್ಲೇ ಪೊಲೀಸರು ತಡೆದರು. ಈ ವಿಚಾರ ತಿಳಿದು ಆಕ್ರೋಶಗೊಂಡ ಡಿ.ಕೆ. ಶಿವಕುಮಾರ್, ಪೊಲೀಸರು ಎಲ್ಲಿ ತಡೆಯುತ್ತಾರೊ ಅಲ್ಲೇ ಪ್ರತಿಭಟಿಸುವಂತೆ, ರಸ್ತೆ ಬಂದ್ ಮಾಡುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದರು.

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಜಿ. ಪರಮೇಶ್ವರ, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ವಾಕ್‌‍ಪ್ರಹಾರ ನಡೆಸಿದರು. ರೈತರ ಚಳವಳಿ ಹತ್ತಿಕ್ಕಲು ಯತ್ನಿಸಲಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಕಾರ್ಯಕರ್ತರು, ರೈತರ ಜೊತೆ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟರು.

ರಾಜ್ಯಪಾಲರ ಭೇಟಿ: ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ ಮತ್ತು ಜಿ. ಪರಮೇಶ್ವರ ಅವರನ್ನೊಳಗೊಂಡ ನಿಯೋಗ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು. ಪ್ರತಿಭಟನೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಕಾಂಗ್ರೆಸ್‌ನಿಂದ ನಾಟಕೀಯ ವಿರೋಧ’

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ರೈತ ಪರ ಕಾಯ್ದೆಗಳಿಗೆ ಕಾಂಗ್ರೆಸ್‌ ನಾಟಕೀಯ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಬಿಜೆಪಿ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದೆ.

ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ಟೀಕಿಸಿ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯ ಘಟಕ, ‘2013–14ರಿಂದ 2018–19ರವರೆಗೆ ರಾಜ್ಯದಲ್ಲಿ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕಣ್ಣೀರು ಒರೆಸುವ ಬದಲಿಗೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಿರಿ. ಈಗ ರಾಜಭವನ ಚಲೋ ಎಂಬ ನಾಟಕ ಚೆನ್ನಾಗಿದೆ’ ಎಂದು ಹೇಳಿದೆ.

ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡುವುದಾಗಿ 2019ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಬಿಜೆಪಿ ಸರ್ಕಾರ ಅದೇ ಕೆಲಸ ಮಾಡಿದಾಗ ಬೀದಿಗೆ ಬಂದು ಬೊಬ್ಬೆ ಹೊಡೆಯುತ್ತಿದೆ. ಕಾಯ್ದೆಗಳಿಂದ ರೈತರಿಗೆ ಲಾಭ ಆಗುತ್ತದೆ ಎಂಬುದು ಸತ್ಯ. ಕಾಂಗ್ರೆಸ್‌ ದಲ್ಲಾಳಿಗಳ ಪರ ಏಕೆ ಮಾತನಾಡುತ್ತಿದೆ ಎಂದು ಪ್ರಶ್ನಿಸಿದೆ.

‘ಕೇಂದ್ರ ಸರ್ಕಾರದ ಕಾಯ್ದೆಗಳನ್ನು ವಿರೋಧಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಕಾಯ್ದೆಗಳು ಹೇಗೆ ರೈತ ವಿರೋಧಿ ಎಂಬುದನ್ನು ತೋರಿಸಬೇಕಲ್ಲವೆ’ ಎಂದು ಬಿಜೆ‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟರ್‌ನಲ್ಲಿ ಕೇಳಿದ್ದಾರೆ.

ರೈತ ಸಮಾವೇಶಕ್ಕೆ ಸೂಚನೆ: ನಗರದ ಒಡೆಯರಹಳ್ಳಿಯ ತೋಟದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ರೈತ ಮೋರ್ಚಾದ ಸಭೆ ನಡೆಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಾವಯವ ಕೃಷಿಯಲ್ಲಿ ತೊಡಗಿರುವ ಒಂದು ಲಕ್ಷ ರೈತರನ್ನು ಸಂಘಟಿಸಿ ಸಮಾವೇಶ ನಡೆಸುವಂತೆ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು