ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ವಿಚಾರಣೆ: ಆತ್ಮಸ್ಥೈರ್ಯ ಕುಗ್ಗಿಸಲು ಷಡ್ಯಂತ್ರ– ರಮೇಶ್ ಕುಮಾರ್ ಟೀಕೆ

Last Updated 21 ಜುಲೈ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವ್ಯಾರು ದೇಶದ ಕಾನೂನಿಗಿಂತ ದೊಡ್ಡವರಲ್ಲ. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ವಾಯತ್ತ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ, ಐ.ಟಿ ಇಲಾಖೆಯನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಕಾಂಗ್ರೆಸ್‌ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಕರೆದರೆ ಕಾಂಗ್ರೆಸ್‌ ಯಾಕೆ ಹೆದರಿಕೊಳ್ಳಬೇಕು ಎಂದು ಹೇಳುತ್ತಿರುವ ಬಿಜೆಪಿಯವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಕಿರುಕುಳ ನೀಡುವ ಉದ್ದೇಶದಿಂದ ನಡೆಸುತ್ತಿರುವ ವಿಚಾರಣೆಗೆ ನಾವು ಪ್ರತಿಭಟಿಸುತ್ತಿದ್ದೇವೆ’ ಎಂದರು.

‘ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆಂದು ಮೋದಿ, ಅಮಿತ್‌ ಶಾ ಹಲವು ಬಾರಿ ಹೇಳಿದ್ದಾರೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರನ್ನು ಇಡಿ ತನಿಖೆ ಮಾಡುವಂಥ ಯಾವುದೇ ಪ್ರಕರಣ ಇಲ್ಲ. ಅಕ್ರಮ ಹಣದ ವರ್ಗಾವಣೆ ಎಲ್ಲಿ ಆಗಿದೆ? ಎಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆದಿದೆ’ ಎಂದು ಪ್ರಶ್ನಿಸಿದ ಅವರು, ‘ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಈ ಚಳುವಳಿ ಶುಕ್ರವಾರದಿಂದ ಜಿಲ್ಲಾ ಮಟ್ಟದಲ್ಲೂ ನಡೆಯಲಿದೆ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಇ.ಡಿ, ಐ.ಟಿ, ಸಿಬಿಐ ಬರಲಿ. ಬಿಜೆಪಿ ದಂಡೇ ಬರಲಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ’ ಎಂದು ಗುಡುಗಿದರು.

‘ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಹೆದರಿಸಿದರೆ, ಎಲ್ಲರೂ ಬಿಜೆಪಿಗೆ ಬರುತ್ತಾರೆ ಎಂದು ಭಾವಿಸಿದರೆ, ಅದು ಆ ಪಕ್ಷದವರ ಭ್ರಮೆ. ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು’ ಎಂದು ಅವರು ಈ ವೇಳೆ ಕಾರ್ಯಕರ್ತರಿಗೆ ಮನವಿ ಮಾಡಿದರು.

‘ಆಸ್ತಿ ಮಾಡಿರುವ ಋಣ ತೀರಿಸಬೇಕಿದೆ’

‘ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬೆಂಬಲಕ್ಕೆ ನಿಂತು, ಗಾಂಧಿ ಕುಟುಂಬದ ಋುಣ ತೀರಿಸಬೇಕಿದೆ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಹೇಳಿದರು.

'ಈ ಕಠಿಣ ಸಂದರ್ಭದಲ್ಲಿ ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತು, ಋಣ ತೀರಿಸಬೇಕು. ಈ ಕರ್ತವ್ಯ ಮಾಡದಿದ್ದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತವೆ' ಎಂದೂ ಅವರು ಹೇಳಿದರು.

‘ಮೇಧಾವಿ ನಾಯಕರಿಗೆ ಅಭಿನಂದನೆ’

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷದ 60 ವರ್ಷಗಳ ‘ಲೂಟ್‌ ಇಂಡಿಯಾ’ ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ವರ್ಣಿಸಿದ ಮೇಧಾವಿ ನಾಯಕರಿಗೆ ಅಭಿನಂದನೆಗಳು’ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ಕಾಂಗ್ರೆಸ್‌ ಶಾಸಕ ರಮೇಶ್‌ಕುಮಾರ್ ಅವರನ್ನು ಉದ್ದೇಶಿಸಿ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

‘ನಿಮ್ಮ ಪಕ್ಷದ ಹಿರಿಯ ನಾಯಕರೇ ಇಷ್ಟು ಪ್ರಾಮಾಣಿಕವಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನೇ ಒಪ್ಪಿಕೊಂಡ ಮೇಲೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೀರಿ’ ಎಂದು ಅವರು ಕಾಂಗ್ರೆಸ್‌ ಪಕ್ಷವನ್ನು ಪ್ರಶ್ನಿಸಿದ್ದಾರೆ. ‘ಗಾಂಧಿ ಕುಟುಂಬದ ಹೆಸರಿನಲ್ಲಿ 3–4 ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆದಿದ್ದೇನೆ, ಋಣ ತೀರಿಸೋಣ ಎಂದಿದ್ದಾರೆ. ಇವರ ಪ್ರಕಾರ ಇ.ಡಿ ಅಧಿಕಾರಿಗಳೇ ಸೋನಿಯಾಗಾಂಧಿ ಅವರ ಮನೆಗೆ ಬರಬೇಕಿತ್ತು. ಕಾಂಗ್ರೆಸ್‌ ನಿಷ್ಠೆ ದೇಶಕ್ಕೋ ಒಂದು ಕುಟುಂಬಕ್ಕೋ? ಕಾಂಗ್ರೆಸ್ ಅಧ್ಯಕ್ಷೆ ಕಾನೂನು ಮತ್ತು ಸಂವಿಧಾನಕ್ಕಿಂತ ದೊಡ್ಡವರೇ’ ಎಂದೂ ಕುಟುಕಿದ್ದಾರೆ.

‘ಕೈ ನಾಯಕರ ತನಿಖೆ ಆಗಲಿ’

‘ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರು–ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ. ಇದಕ್ಕೆ ನಾವು ಸೋನಿಯಾಗಾಂಧಿ ಅವರಿಗೆ ಋಣಿಯಾಗಬೇಕು’ ಎಂದು ಕಾಂಗ್ರೆಸ್‌ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್‌ನ ಎಲ್ಲ ನಾಯಕರನ್ನೂ ಇ.ಡಿ ತನಿಖೆಗೆ ಒಳಪಡಿಸಬೇಕು ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್‌ ಒತ್ತಾಯಿಸಿದ್ದಾರೆ.

‘ರಮೇಶ್‌ಕುಮಾರ್ ತಮ್ಮ ಸಹಜವಾದ ಭಾಷಣದ ವೇಳೆ ಬಹಳ ದಿನಗಳ ಬಳಿಕ ಸತ್ಯ ಹೇಳಿದ್ದಾರೆ. ಆದ್ದರಿಂದ ಸೋನಿಯಾ, ರಾಹುಲ್‌ ಗಾಂಧಿ ಮಾತ್ರವಲ್ಲ ಕಾಂಗ್ರೆಸ್‌ನ ಎಲ್ಲ ನಾಯಕರನ್ನೂ ಇ.ಡಿ ತನಿಖೆಗೆ ಒಳಪಡಿಸಬೇಕು. ಈ ಆರೋಪ ಮಾಡಿರುವುದು ಕಾಂಗ್ರೆಸ್ ನಾಯಕರೇ ಹೊರತು ಬಿಜೆಪಿ ನಾಯಕರಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT