ಬುಧವಾರ, ಅಕ್ಟೋಬರ್ 20, 2021
25 °C

ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಪಂಜಿನ ಮೆರವಣಿಗೆ: ಕಾಂಗ್ರೆಸ್‌ ನಾಯಕರ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಮತ್ತು ಮೃತ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಪಂಜಿನ ಮೆರವಣಿಗೆ ನಡೆಸಲು ಮುಂದಾದ ಕಾಂಗ್ರೆಸ್‌ ನಾಯಕರನ್ನು ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಬಳಿ ತಡೆದ ಪೊಲೀಸರು ವಶಕ್ಕೆ ಪಡೆದರು.

ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಆರ್. ಧ್ರುವನಾರಾಯಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಇದ್ದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬಿಜೆಪಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಾಂಗ್ರೆಸ್ ನಾಯಕ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜೀನಾಮೆ ನೀಡಲಿ: ‘ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಳಗ್ಗೆ ಮಾತನಾಡಿದ ಅವರು, ‘ದೇಶದಲ್ಲಿ ನೀಚ ರಾವಣ ಸರ್ಕಾರ ಅಧಿಕಾರ ನಡೆಸುತ್ತಿದೆ. ಹೀಗಾಗಿ, ಅನ್ನದಾತರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಕೇವಲ ನಾಲ್ವರು ರೈತರ ಕೊಲೆ ಅಲ್ಲ. ರೈತ ಸಮುದಾಯದ ಕೊಲೆ. ಪ್ರಜಾತಂತ್ರ ವ್ಯವಸ್ಥೆಯ ಕೊಲೆ. ಬಲಿಯಾದ ರೈತರ ಕುಟುಂಬವನ್ನು ಭೇಟಿ ಮಾಡಲು ಮುಂದಾದ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವುದು ಖಂಡನೀಯ. ಪುರುಷ ಪೊಲೀಸ್ ಅಧಿಕಾರಿಗಳು ಪ್ರಿಯಾಂಕಾ ಗಾಂಧಿ ಅವರ ಮೈ ಮೇಲೆ ಕೈ ಹಾಕಿ ಎಳೆದಾಡಿದ್ದಾರೆ. ಮಹಿಳೆಯರಿಗೆ ಮಾಡಿದ ಅಪಮಾನವಿದು’ಎಂದರು.

‘ಕೃಷಿ ಕರಾಳ ಕಾಯ್ದೆಗಳನ್ನು ವಿರೋಧಿಸಿ 10 ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಅನ್ನದಾತನ ಬೆಂಬಲಕ್ಕೆ ಪಕ್ಷ ನಿಲ್ಲಲಿದೆ. ಕೇಂದ್ರ ಸರ್ಕಾರ ಇನ್ನಾದರೂ ತನ್ನ ಸರ್ವಾಧಿಕಾರಿ ಮನಸ್ಥಿತಿಯಿಂದ ಹೊರಬರಬೇಕು’ ಎಂದರು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ್– ಖೇರಿ ಜಿಲ್ಲೆಯಲ್ಲಿ ಸಚಿವರ ಬೆಂಗಾವಲು ವಾಹನ ಹರಿದು ಪ್ರತಿಭಟನನಿರತ ರೈತರು ಮೃತಪಟ್ಟಿರುವ ಘಟನೆಯನ್ನು ಖಂಡಿಸಿ ನಗರದ ಹಲವು ಸಂಘಟನೆಗಳ ಪದಾಧಿಕಾರಿಗಳು ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಆಲ್‌ ಇಂಡಿಯಾ ಕೃಷಿಕ್ ಖೇತ್ ಮಜ್ದೂರ್ ಸಂಘ(ಎಐಕೆಕೆಎಂಸ್), ರೈತ ಕೃಷಿ ಕಾರ್ಮಿಕರ ಸಂಘಟನೆ, ಎಐಎಸ್‌ಎ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ಕೇಂದ್ರ ಸರ್ಕಾರ, ಕ್ರೂರ ಸರ್ಕಾರ’, ‘ರೈತರನ್ನು ಕೊಲೆ ಮಾಡಿರುವ ಮಿಶ್ರಾನನ್ನು ಬಂಧಿಸಿ’, ‘ರೈತರ ಮೇಲಿನ ದೌರ್ಜನ್ಯ ನಿಲ್ಲಲಿ’, ‘ಅನ್ನ ಹಾಕುವ ರೈತರನ್ನೇ ಕೊಲ್ಲುವ ಮನಸ್ಥಿತಿಗೆ ಧಿಕ್ಕಾರ’ ಸೇರಿದಂತೆ ಹಲವು ಘೋಷಣಾ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

‘ಕೇಂದ್ರ ಸರ್ಕಾರ, ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡುತ್ತ ಬರುತ್ತಿದೆ. ಹೊಸ ಕೃಷಿ ಕಾಯ್ದೆಗಳನ್ನು ತಂದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದರ ವಿರುದ್ಧ ಧ್ವನಿಯೆತ್ತುವ ರೈತರನ್ನು ಕೊಲೆ ಮಾಡುವ ಹಂತಕ್ಕೂ ಸರ್ಕಾರ ಬಂದು ತಲುಪಿದೆ’ ಎಂದು ಪ್ರತಿಭಟನಕಾರರು ಕಿಡಿಕಾರಿದರು.

‘ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯನ್ನು ಇಡೀ ದೇಶವೇ ಖಂಡಿಸುತ್ತಿದೆ. ಕೃತ್ಯಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು, ಎಚ್ಚರಿಕೆ ಸಂದೇಶ ರವಾನಿಸಬೇಕು’ ಎಂದೂ ಒತ್ತಾಯಿಸಿದರು.

ವಾಹನಗಳ ತಡೆಗೆ ಯತ್ನ: ಪ್ರತಿಭಟನಕಾರರು ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಹನಗಳ ಸಂಚಾರ ತಡೆಯಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ‘ವಾಹನವನ್ನು ಅಡ್ಡಗಟ್ಟಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ’ ಎಂದರು. ಪರಸ್ಪರ ಮಾತಿನ ಚಕಮಕಿಯೂ ನಡೆಯಿತು.

ರಸ್ತೆಯಲ್ಲಿ ಕುಳಿತಿದ್ದ ಕೆಲವರನ್ನು ಪೊಲೀಸರು, ಪಕ್ಕಕ್ಕೆ ಸರಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

‘ಬಿಜೆಪಿಯ ಕೊಲೆಗಡುಕ‌ ಮನಸ್ಸಿಗೆ ಸಾಕ್ಷಿ’

‘ಉತ್ತರ ಪ್ರದೇಶದಲ್ಲಿ ಸಚಿವರ ಮಗನ ಕಾರಿನಡಿಗೆ ಸಿಕ್ಕಿ ರೈತರು ಸಾವಿಗೀಡಾದ ಪ್ರಕರಣ ಬಿಜೆಪಿಯ ಕೊಲೆಗಡುಕ‌ ಮನಸ್ಸಿಗೆ ಸಾಕ್ಷಿ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಗೂಂಡಾ ರಾಜ್ಯದಲ್ಲಿ ದಲಿತರು, ರೈತರು,‌ ಮಹಿಳೆಯರು ಮತ್ತು ಬಡವರ ಮಾನ- ಪ್ರಾಣ ಯಾವುದೂ ಸುರಕ್ಷಿತ ಅಲ್ಲ. ಸಂವಿಧಾನವೇ ಕುಸಿದು‌ಬಿದ್ದಿರುವ ಸ್ಥಿತಿಯಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಿ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರತಿರೋಧ- ಭಿನ್ನಾಭಿಪ್ರಾಯ ಸಹಿಸದ ಬಿಜೆಪಿ ಸರ್ಕಾರ, ತನ್ನ ತಾಲಿಬಾನ್‌ ಮನಸ್ಥಿತಿಯನ್ನು ಬೆತ್ತಲು‌ ಮಾಡಿಕೊಳ್ಳುತ್ತಿದೆ. ರೈತರ‌ ಹತ್ಯೆ ನಡೆದ ಸ್ಥಳಕ್ಕೆ ಭೇಟಿ‌ ನೀಡಲು ಹೊರಟ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು