ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

‘ಬೆಲೆ ಏರಿಕೆ ಮುಕ್ತ ಭಾರತ’ಕ್ಕೆ ಆಗ್ರಹಿಸಿ ಪ್ರತಿಭಟನೆ l ಪಂಚರಾಜ್ಯ ಚುನಾವಣೆ ಬಳಿಕ ನಿತ್ಯವೂ ಬೆಲೆ ಏರಿಕೆ ಆರೋಪ
Last Updated 11 ಏಪ್ರಿಲ್ 2022, 18:52 IST
ಅಕ್ಷರ ಗಾತ್ರ

ಬೆಂಗಳೂರು: ‘ತೈಲ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ, ಜನಸಾಮಾನ್ಯರ ಲೂಟಿಗೆ ಇಳಿದಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ‘ಬೆಲೆ ಏರಿಕೆ ಮುಕ್ತ ಭಾರತ’ವಾಗಲಿ ಎಂದು ಆಗ್ರಹಿಸಿದರು. ‘ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂಬ ಬರಹವುಳ್ಳ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಪೂಜೆ ಮಾಡಿ, ಕಟ್ಟಿಗೆಯ ಒಲೆಯಿಂದ ಅಡುಗೆ ತಯಾರಿಸಿ ಆಕ್ರೋಶ
ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ, ಅಡುಗೆ ಎಣ್ಣೆ, ರಸಗೊಬ್ಬರ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದರಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ’ ಎಂದರು.

‘ಪಂಚರಾಜ್ಯ ಚುನಾವಣೆ ಮುಗಿದ ದಿನದಿಂದಲೇ ನಿತ್ಯವೂ ಬೆಲೆ ಏರಿಕೆ ಆಗುತ್ತಿದೆ. ಕೇಂದ್ರ ಸರ್ಕಾರ, ಬಡವರ ಲೂಟಿಗೆ ಇಳಿದಿದೆ. ದೇಶದ ಹಲವು ಉದ್ದಿಮೆದಾರರು, ಸರ್ಕಾರದ ಕಿರುಕುಳದಿಂದಾಗಿ ದೇಶ ತೊರೆಯುತ್ತಿದ್ದಾರೆ. ತೈಲ ಹಾಗೂ ದಿನಬಳಕೆ ವಸ್ತುಗಳ ದರ ಹೆಚ್ಚಳವಿಂದ ಮಧ್ಯಮ ವರ್ಗ ಹಾಗೂ ಬಡವರು ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದೂ ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಬಿಜೆಪಿ ಸರ್ಕಾರ ಎಂದರೆ ಸುಳ್ಳಿನ ಕಾರ್ಖಾನೆ. ಮೋದಿ ಅವರು ಪ್ರಧಾನಿಯಾದ ನಂತರ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಸ್ವಾತಂತ್ರ್ಯ ಭಾರತದಲ್ಲಿ ಮೋದಿಯವರಷ್ಟು ಸುಳ್ಳು ಹೇಳಿದ ಪ್ರಧಾನಿ ಮತ್ತೊಬ್ಬರಿಲ್ಲ’ ಎಂದರು.

‘ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಡೀಸೆಲ್ ಮೇಲೆ ₹ 3.46 ಸುಂಕ ಹಾಗೂ ಪೆಟ್ರೋಲ್ ಮೇಲೆ ₹ 9.20 ಅಬಕಾರಿ ಸುಂಕ ಇತ್ತು. ಆದರೆ, ಇಂದು ₹ 31.84 ಸುಂಕ, ₹ 32.98 ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರ ಮಾಡುತ್ತಿರುವ ಲೂಟಿ’ ಎಂದೂ ದೂರಿದರು.

ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘ಒಂದು ಅವಕಾಶ ಕೊಡಿ ಸ್ವರ್ಗ ತೋರಿಸುತ್ತೇವೆ’ ಎಂದು ಹೇಳಿದ್ದ ಮೋದಿ ಅವರು ಈಗ ಮತದಾರರಿಗೆ ನರಕ ತೋರಿಸುತ್ತಿದ್ದಾರೆ ಎಂದರು.

ಎಐಸಿಸಿ ಕಾರ್ಯದರ್ಶಿ ರಮಿಂದರ್ ಸಿಂಗ್ ಅವ್ಲಾ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಆರ್. ಧ್ರುವ ನಾರಾಯಣ, ಈಶ್ವರ್ ಖಂಡ್ರೆ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್ ಪ್ರತಿಭಟನೆಯಲ್ಲಿದ್ದರು.

ಕಾಂಗ್ರೆಸ್‌ಗೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ:ಬೊಮ್ಮಾಯಿ

ಬೆಂಗಳೂರು: ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ದೇಶದಲ್ಲಿ ಅತಿ ಹೆಚ್ಚು ಬೆಲೆ ಏರಿಕೆ ಮಾಡಿದ ಖ್ಯಾತಿ, ಕೀರ್ತಿ ಮತ್ತು ದಾಖಲೆ ಕಾಂಗ್ರೆಸ್‌ನದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಇಲ್ಲಿ ಹೇಳಿದರು.

‘ಹಿಜಾಬ್‌ ವಿಚಾರದಲ್ಲಿ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ಗೆ ಅಲ್‌ಕೈದಾ ಮುಖ್ಯಸ್ಥ ಅಲ್‌ ಜವಾಹಿರಿ ಬೆಂಬಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತ ಕುಮಾರ್‌ ಹೆಗಡೆ ನನಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಅವರ ಜತೆ ಚರ್ಚೆ ಮಾಡಿ, ಅವರಲ್ಲಿ ಇರುವ ಮಾಹಿತಿ ಪಡೆದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT