ಬುಧವಾರ, ಆಗಸ್ಟ್ 10, 2022
19 °C

ಪಕ್ಷದೊಳಗಿನ ಭಿನ್ನಮತ ಬಗೆಹರಿಸಲು ರಾಜ್ಯಕ್ಕೆ ಅರುಣ್‌ ಸಿಂಗ್: ಕಾಂಗ್ರೆಸ್ ವ್ಯಂಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನರ ಸೇವೆ ಮಾಡುವ ಬದಲು ಬಿಜೆಪಿ ಪಕ್ಷದೊಳಗಿನ ಜಗಳವನ್ನು ಬಗೆಹರಿಸಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಅವರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಅರುಣ್‌ ಸಿಂಗ್‌ ಅವರು ಇಂದು ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ನಾಳೆ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಶುಕ್ರವಾರ ರಾಜ್ಯದ ಕೋರ್‌ ಕಮಿಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಬಳಿಕ ದೆಹಲಿಗೆ ತೆರಳಲಿದ್ದಾರೆ.

ಅರುಣ್‌ ಸಿಂಗ್‌ ಭೇಟಿ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಪ್ರಿಯ ಅರುಣ್ ಸಿಂಗ್, ನೀವು ‘ಕಟ್ಟೆ ಪಂಚಾಯ್ತಿ’ ನಡೆಸಲು ಇಲ್ಲಿಗೆ ಧಾವಿಸುತ್ತಿದ್ದೀರಿ. ಆದರೆ, ಜನರ ಕುಂದುಕೊರತೆಗಳನ್ನು ಪರಿಹರಿಸಲು ನಿಮಗೆ ಸಮಯವಿಲ್ಲವೇ? ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಾಧನೆಗಿಂತಲ್ಲೂ ಜಗಳವಾಡಿದ್ದೇ ಹೆಚ್ಚು. ರಾಜ್ಯವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಬಿಜೆಪಿ ಆಂತರಿಕ ಕಲಹದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದೆ’ ಎಂದು ಟೀಕಿಸಿದೆ.

ಕೋವಿಡ್‌ ಮೂರನೇ ಅಲೆ, ಬ್ಲ್ಯಾಕ್ ಫಂಗಸ್‌, ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿಗೆ ಸಮಯವಿಲ್ಲ. ಆದರೆ, ರಾಜಕೀಯ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಇಂದಿನಿಂದ (ಜೂ.16) ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಬೀಡು ಬಿಡಲಿರುವ ಅರುಣ್ ಸಿಂಗ್, ಸಚಿವರು, ಶಾಸಕರು ಮತ್ತು ಸಂಸದರ ಅಹವಾಲುಗಳನ್ನು ಆಲಿಸಿ, ವರಿಷ್ಠರಿಗೆ ಮಾಹಿತಿ ನೀಡಲು ನಿರ್ಧರಿಸಿದ್ದಾರೆ. ಈ ಮಧ್ಯೆ, ನಾಯಕತ್ವದ ಬದಲಾವಣೆಯ ಪರ ಮತ್ತು ವಿರುದ್ಧ ಇರುವವರೂ ದೂರುಗಳನ್ನು ಸಲ್ಲಿಸಲು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆ, ಆಡಳಿತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗನ ಹಸ್ತಕ್ಷೇಪ, ಸರ್ಕಾರದ ಕಾರ್ಯವೈಖರಿ ಕುರಿತ ಅಸಮಾಧಾನಕ್ಕೆ ಸಂಬಂಧಿಸಿ ಬಿಜೆಪಿಯ ಎರಡು ಬಣಗಳ ಮಧ್ಯೆ ನಡೆದಿರುವ ಗುದ್ದಾಟದ ಬಗ್ಗೆ ಇಬ್ಬಣಗಳ ಅಹವಾಲು ಆಲಿಕೆಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ರಾಜ್ಯಕ್ಕೆ ಬರಲಿದ್ದು, ಮುಂದೇನಾಗುವುದೆಂಬ ಕುತೂಹಲ ಆಡಳಿತ ಪಕ್ಷದ ಪಾಳೆಯದಲ್ಲಿ ಮನೆ ಮಾಡಿದೆ.

ಇದನ್ನೂ ಓದಿ... ಇಂದು ರಾಜ್ಯಕ್ಕೆ ಅರುಣ್‌ಸಿಂಗ್‌: ಬಿಜೆಪಿ ಬಣಗಳ ಗುದ್ದಾಟಕ್ಕೆ ಬೀಳುತ್ತಾ ಬ್ರೇಕ್ ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು