ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಎಐಸಿಸಿ ರಚಿಸಿರುವ ಸ್ಕ್ರೀನಿಂಗ್ ಸಮಿತಿ ಅಖಾಡಕ್ಕಿಳಿದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಇತರ ಪ್ರಮುಖರ ಜೊತೆ ಭಾನುವಾರ ಪ್ರತ್ಯೇಕ ಸಭೆಗಳನ್ನು ನಡೆಸಿತು. ನೀರಜ್ ಡಾಂಗಿ, ಮೊಹಮ್ಮದ್ ಜಾವೇದ್, ಸಪ್ತಗಿರಿ ಉಲಾಕ ಸಮಿತಿ ಸದಸ್ಯರಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಆರ್. ಧ್ರುವನಾರಾಯಣ, ರಾಜ್ಯದ ಉಸ್ತುವಾರಿ ಹೊಂದಿರುವ ಎಐಸಿಸಿ ಕಾರ್ಯದರ್ಶಿಗಳಾದ ಪಿ.ಸಿ.ವಿಷ್ಣುನಾಥ್, ರೋಜಿ ಜಾನ್, ಮಯೂರ ಜಯಕುಮಾರ್, ಶ್ರೀಧರ್ ಬಾಬು, ಅಭಿಷೇಕ್ ದತ್ತ್, ಪಕ್ಷದ ಹಿರಿಯ ಮುಖಂಡರಾದ ಮಾರ್ಗರೆಟ್ ಆಳ್ವಾ, ವೀರಪ್ಪ ಮೊಯಿಲಿ ಅವರಿಂದ ಸಮಿತಿ ಗೋಪ್ಯವಾಗಿ ಅಭಿಪ್ರಾಯ ಸಂಗ್ರಹಿಸಿತು.
ಈ ವೇಳೆ ಮಾತನಾಡಿದ ಸಲೀಂ ಅಹ್ಮದ್, ‘ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ನಾವು (ಕಾರ್ಯಾಧ್ಯಕ್ಷರು) ರಾಜ್ಯದಾದ್ಯಂತ ಸುತ್ತಾಡಿ ಸಂಗ್ರಹಿಸಿದ ಮಾಹಿತಿಗಳನ್ನು ಸ್ಕ್ರೀನಿಂಗ್ ಸಮಿತಿ ಪರಾಮರ್ಶೆ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ
ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಸೇರಿ ಪ್ರಮುಖರ ಜೊತೆ ಸೋಮವಾರ ಸಭೆ ನಡೆಯಲಿದೆ. ಫೆ.14ರಂದು ಟಿಕೆಟ್ ಆಕಾಂಕ್ಷಿಗಳ ಜೊತೆ
ಸಮಾಲೋಚನೆ ನಡೆಸಲಿದೆ’ ಎಂದರು.
‘ಮುಖಂಡರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಮಿತಿ ಅಂತಿಮಗೊಳಿಸಲಿದೆ. ಬಳಿಕ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲಿದೆ. ಈ ತಿಂಗಳ ಅಂತ್ಯದೊಳಗೆ ಮೊದಲ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ’ ಎಂದೂ ತಿಳಿಸಿದರು.
ಲಿಂಗಾಯತ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡುವಂತೆ ಪಕ್ಷದ ಕೆಲವು ನಾಯಕರ ಬೇಡಿಕೆ ಕುರಿತಂತೆ ಈಶ್ವರ ಖಂಡ್ರೆ, ‘ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಸಮುದಾಯ ಪ್ರತಿ ಬಾರಿ ಬೆನ್ನೆಲುಬಾಗಿ ನಿಂತಿದೆ. ಸಮುದಾಯದ ಅರ್ಹರಿಗೆ ಟಿಕೆಟ್ ಕೊಡುವುದು ಸೂಕ್ತ’ ಎಂದರು.
‘ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರಗಳಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ರಾಮಲಿಂಗಾರೆಡ್ಡಿ ಅವರಿಂದ ಸಮಿತಿ ಮಾಹಿತಿ ಪಡೆಯಿತು. ಕ್ಷೇತ್ರಾವಾರು ಪರಿಸ್ಥಿತಿ, ಎಷ್ಟು ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲ್ಲಬಹುದು, ಎಲ್ಲಿ ನೇರ ಪೈಪೋಟಿಯಿದೆ, ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.