ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೆಚ್ಚಳಕ್ಕೆ ನಾಂದಿ ಹಾಡಿದ್ದು ಕಾಂಗ್ರೆಸ್‌: ರಾಹುಲ್‌

ಬಳ್ಳಾರಿಯಲ್ಲಿ ನಡೆದ ಪಾದಯಾತ್ರೆಯ ಮೊದಲ ಬಹಿರಂಗ ಸಭೆ; ಬಿಜೆಪಿ ವಿರುದ್ಧ ನಾಯಕರ ವಾಗ್ದಾಳಿ
Last Updated 15 ಅಕ್ಟೋಬರ್ 2022, 17:42 IST
ಅಕ್ಷರ ಗಾತ್ರ

ಬಳ್ಳಾರಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಕುರಿತು ವರದಿ ಸಲ್ಲಿಸಲು ನ್ಯಾ. ನಾಗಮೋಹನ ದಾಸ್‌ ಸಮಿತಿ ನೇಮಿಸಿದ್ದು ಕಾಂಗ್ರೆಸ್‌ ಸರ್ಕಾರ, ಯಾವುದೇ ನೆಪ ಹೇಳದೆ ಬಿಜೆಪಿ ಸರ್ಕಾರ ಈ ವರದಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಗ್ರಹಿಸಿದರು.

ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ನಡೆದ ಭಾರತ್‌ ಜೋಡೊ ಯಾತ್ರೆಯ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಾಗಮೋಹನ ದಾಸ್ ಶಿಫಾರಸ್ಸನ್ನು ಏಕೆ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದು ಕಾಂಗ್ರೆಸ್‌ ಸರ್ಕಾರ.ಇದರಿಂದ ಈ ಭಾಗದ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸಿಗುವಂತಾಗಿದೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿದ್ದ ಎಲ್‌.ಕೆ. ಅಡ್ವಾಣಿಯವರು ರಾಜ್ಯದಿಂದ ಹೋಗಿದ್ದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು ಎಂದು ವಿವರಿಸಿದರು.

‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಿಎಸ್‌ಐ ಹುದ್ದೆಗಳನ್ನು ಮಾರಾಟಕ್ಕಿಟ್ಟಿದೆ. ₹ 80 ಲಕ್ಷ ಇದ್ದರೆ ನೀವು ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನ ಪರ್ಯಂತ ನಿರುದ್ಯೋಗಿಗಳಾಗಿ ಉಳಿಯಬೇಕಾಗುತ್ತದೆ’ ಎಂದು ರಾಹುಲ್‌ ಹೇಳಿದರು.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಮಾಜಿ ಸಚಿವ ಎಚ್‌.ಕೆ. ಪಾಟೀಲ, ರಾಜ್ಯಸಭಾ ಸದಸ್ಯರಾದ ಸಯ್ಯದ್‌ ನಾಸಿರ್‌ ಹುಸೇನ್‌, ಎಲ್‌. ಹನುಮಂತಯ್ಯ, ಪಕ್ಷದ ಶಾಸಕರು ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಸ್ವಾಗತಿಸಿದರು. ಶಾಸಕ ಬಿ. ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT