ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವಕ್ಕಾಗಿ ಕಸಾಪ ವಿರುದ್ಧ ಪಿತೂರಿ: ಮಹೇಶ ಜೋಶಿ ಆರೋಪ

ಮಹೇಶ ಜೋಶಿ ಆರೋಪ * ಸದಸ್ಯತ್ವ ರದ್ಧತಿ, ಮಾರ್ಗಸೂಚಿ ಬಗ್ಗೆ ಸ್ಪಷ್ಟನೆ
Last Updated 23 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕಾರ್ಯಚಟುವಟಿಕೆಗಳನ್ನು ಸಹಿಸಲಾಗದ ಒಂದು ಗುಂಪು, ತಮ್ಮ ಅಸ್ತಿತ್ವಕ್ಕಾಗಿ ಪರಿಷತ್ತಿನ ವಿರುದ್ಧ ಪಿತೂರಿ ಮಾಡುತ್ತಿದೆ. ಸ್ವಾಯತ್ತತೆ ಹೊಂದಿರುವ ಈ ಸಂಸ್ಥೆಯ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸ್ಪಷ್ಟನೆ ನೀಡಿದರು.

‘ಚುನಾವಣೆ ಪೂರ್ವದಿಂದಲೂ ಎಸ್.ಜಿ.ಸಿದ್ಧರಾಮಯ್ಯ, ಡಾ. ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಕೆ. ಶರೀಫಾ, ಎಚ್.ಎಲ್. ಪುಷ್ಪಾ, ಆರ್‌.ಜಿ. ಹಳ್ಳಿ ನಾಗರಾಜ್, ಪುರುಷೋತ್ತಮ ಬಿಳಿಮಲೆ, ವಿಮಲಾ ಕೆ.ಎಸ್. ಸೇರಿ ಕೆಲವರು ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅವರನ್ನು ಬಿಟ್ಟರೆ ಬೇರೆಯವರಿಂದ ವಿರೋಧ ವ್ಯಕ್ತವಾಗಿಲ್ಲ. ತಮ್ಮ ಅಸ್ತಿತ್ವಕ್ಕಾಗಿ ಪರಿಷತ್ತಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಸರದಾರರ ಜೊತೆಗೆ ವಿರೋಧಿಸುವವರ ಗುಂಪು ಗುರುತಿಸಿಕೊಂಡಿದೆ. ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಯಶಸ್ಸನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ಪರಿಷತ್ತಿನ ಬಗ್ಗೆ ನಿಜವಾದ ಕಾಳಜಿ, ಗೌರವ ಇದ್ದರೆ ಚರ್ಚೆಯ ಮೂಲಕ ಉತ್ತರ ಕಂಡುಕೊಳ್ಳಲು ಅವಕಾಶವಿದೆ. ಆದರೆ, ಇದಕ್ಕೆ ಸಿದ್ಧರಿಲ್ಲದವರು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರಿಂದ ಚುನಾಯಿತರಾದ ನಮಗೆ ಕನ್ನಡ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಹೆಜ್ಜೆ ಹೆಜ್ಜೆಗೂ ಪ್ರತಿರೋಧ ತೋರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ’ ಎಂದರು.

‘ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿರುವುದು ಸರ್ವಾಧಿಕಾರಿ ಧೋರಣೆಯಲ್ಲ. ನಮ್ಮ ಕಾರ್ಯವ್ಯಾಪ್ತಿಯಲ್ಲಿ ಅಧಿಕಾರ ಚಲಾಯಿಸಲಾಗಿದೆ. ಸಭೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಕೆಲ ಸದಸ್ಯರು ಅಳಲು ತೋಡಿಕೊಂಡಿದ್ದರು. ಸಭೆಯಲ್ಲಿ ಶಿಸ್ತು ಅಗತ್ಯ. ಎಲ್ಲ ಕಡೆಯೂ ಈ ರೀತಿಯ ಕಾರ್ಯಸೂಚಿ ಸಹಜ. ರಾಜ್ಯಾಧ್ಯಕ್ಷನಾಗಿ ನಾನು ವಕ್ತಾರನಾಗಿರುತ್ತೇನೆ. ಸರಿಯಾದ ಮಾಹಿತಿ ಜನರಿಗೆ ದೊರೆಯಬೇಕು. ಆದ್ದರಿಂದ ಮಾರ್ಗಸೂಚಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ’ ಎಂದು ಮಹೇಶ ಜೋಶಿ ಹೇಳಿದರು.

‘ಗೋವಿಂದ ಭಟ್ಟರ ಹೆಸರಿನಲ್ಲಿ ವಿವಾದ’

‘ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ತೊಂದರೆ ಕೊಡಬೇಕೆಂದು ಪಿತೂರಿ ಮಾಡಿ, ಶಿಶುನಾಳ ಶರೀಫರ ಗುರು ಗೋವಿಂದ ಭಟ್ಟರನ್ನೂ ವಿವಾದಕ್ಕೆ ತರಲಾಯಿತು. ಸಮ್ಮೇಳನಕ್ಕೆ ನಾಲ್ಕು ದಿನವಿರುವಾಗ ವ್ಯಕ್ತಿಯೊಬ್ಬರು ನಾನು ಗೋವಿಂದ ಭಟ್ಟರ ವಂಶದವನಲ್ಲ ಎಂದು ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದರು. ಹಣದ ಆಮಿಷಕ್ಕೆ ಈ ಕೆಲಸ ಮಾಡಿರುವುದಾಗಿ ಅವರೇ ಹೇಳಿದ್ದಾರೆ. ನಾನು ಆ ವಂಶದವನು ಎನ್ನುವುದಕ್ಕೆ ಪುಸ್ತಕದಲ್ಲಿಯೂ ಉಲ್ಲೇಖವಿದೆ. ದೂರದರ್ಶನದಲ್ಲಿ ಇದ್ದಾಗ ‘ಈಶ್ವರ ಅಲ್ಲಾ ನೀನೇ ಎಲ್ಲಾ’ ಧಾರವಾಹಿ ಪ್ರಸಾರ ವಾಗುವಾಗಲೂ ಗೋವಿಂದ ಭಟ್ಟರ ಮರಿಮೊಮ್ಮಗ ಅಂತ ಬರುತ್ತಿತ್ತು. ಆಗ ವಿರೋಧ ವ್ಯಕ್ತಪಡಿಸದವರು ಈಗ ಏಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಮಹೇಶ ಜೋಶಿ ಪ್ರಶ್ನಿಸಿದರು.

‘ಸದಸ್ಯತ್ವ ಅಮಾನತು ಮೊದಲಲ್ಲ’

‘ಬೆಂಗಳೂರು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿಯಾದ ನಿರ್ಮಲಾ ಸಿ. ಎಲಿಗಾರ ಅವರು 2023ರ ಜ.3ರಂದು 31 ಮಂದಿಗೆ ವಸತಿ ವ್ಯವಸ್ಥೆ, ಜನರೇಟರ್ ನೀಡುವಂತೆ ಕೇಳಿದರು. ದೂರದರ್ಶನ ಸರ್ಕಾರಿ ಸಂಸ್ಥೆ. ಸರ್ಕಾರಿ ನೌಕರರು ಈ ರೀತಿ ಸೌಲಭ್ಯ ಕೇಳುವುದು ಭ್ರಷ್ಟಾಚಾರ. ಅವರು ಉದ್ದೇಶಪೂರ್ವಕವಾಗಿ ನಮ್ಮ ವಿರುದ್ಧ ಆರೋಪಿಸಿ, ದೂರದರ್ಶನ ಕಚೇರಿಯಲ್ಲಿ ಮೌನಾಚರಣೆ ನಡೆಸಿದರು. ಈ ಬಗ್ಗೆ ನೋಟಿಸ್ ನೀಡಿ, ಉತ್ತರ ಕೇಳಲಾಗಿತ್ತು.ಅಧ್ಯಕ್ಷರಿಗೆ ಇರುವ ಅಧಿಕಾರದಡಿಯೇ ಅವರ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ’ ಎಂದು ಮಹೇಶ ಜೋಶಿ ಹೇಳಿದರು.

‘1965ರಲ್ಲಿ ಪರಿಷತ್ತಿನ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಕ್ಕೆ ಅಂದಿನ ಅಧ್ಯಕ್ಷ ಜಿ. ವೆಂಕಟಸುಬ್ಬಯ್ಯ ಅವರು ಎಂ.ವಿ.ಸುಬ್ಬರಾವ್ ಅವರನ್ನು ಸದಸ್ಯತ್ವದಿಂದ ವಜಾ ಮಾಡಿದ್ದರು. 1981ರಲ್ಲಿ ಮತಿಘಟ್ಟ ಕೃಷ್ಣಮೂರ್ತಿ ಅವರ ಸದಸ್ಯತ್ವವನ್ನು ಹಂ.ಪ. ನಾಗರಾಜಯ್ಯ ವಜಾಗೊಳಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT