ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ: ಕೇರಳದ ಬೇಡಿಕೆ ತಿರಸ್ಕರಿಸಿದ ಕರ್ನಾಟಕ

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಸಾಧ್ಯವಿಲ್ಲ: ಮುಖ್ಯಮಂತ್ರಿ
Last Updated 18 ಸೆಪ್ಟೆಂಬರ್ 2022, 8:44 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ, ವನ್ಯಜೀವಿಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ'ಎಂದು ಕೇರಳ ಸರ್ಕಾರಕ್ಕೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾದ ಬಳಿಕ ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಇತ್ತೀಚೆಗೆ ನಡೆದ ದಕ್ಷಿಣ ವಲಯ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಪಿಣರಾಯಿ ವಿಜಯನ್ ಬಂದಿದ್ದರು’ ಎಂದರು.

‘ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿಕೆ ಸಲ್ಲಿಸಿತ್ತು. ಪ್ರಸ್ತಾಪಿತ ಕಾಞಂಗಾಡ್–ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ. ಮಾರ್ಗ ಹೊಂದಿದ್ದು, ರಾಜ್ಯಕ್ಕೆ ಇದರಿಂದ ಹೆಚ್ಚಿನ ಅನುಕೂಲಗಳಿಲ್ಲ. ಅಲ್ಲದೆ, ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಈ ರೈಲು ಮಾರ್ಗ ಹಾದು ಹೋಗುವ ಕಾರಣ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ’ ಎಂದರು.

‘ಹಳೆಯ ಯೋಜನೆಯಾದ ತಲಚೇರಿ- ಮೈಸೂರು ರೈಲು ಯೋಜನೆಯನ್ನೂ ಪಿಣರಾಯಿ ವಿಜಯನ್‌ ಪ್ರಸ್ತಾಪಿಸಿದರು. ಈ ರೈಲು ಮಾರ್ಗವು ಬಂಡಿಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ಹಾದುಹೋಗುವುದರಿಂದ ಅಲ್ಲಿನ ವನ್ಯಜೀವಿ ಸಂಪತ್ತು ಹಾಗೂ ಅರಣ್ಯ ಸಂಪತ್ತಿಗೆ ಹಾನಿಯಾಗಲಿದೆ. ಹೀಗಾಗಿ, ಇದಕ್ಕೂ ಸಮ್ಮತಿಸಲು ಸಾಧ್ಯವಿಲ್ಲ ಎಂದಾಗ, ಭೂಗತ ರೈಲು ಮಾರ್ಗ ನಿರ್ಮಿಸುವ ಕುರಿತು ಕೇರಳ ಸರ್ಕಾರ ಪ್ರಸ್ತಾಪಿಸಿದೆ. ಆದರೆ, ಇದರಿಂದಲೂ ನಿರ್ಮಾಣ ಚಟುವಟಿಕೆ ಸಂದರ್ಭದಲ್ಲಿ ಪರಿಸರ ಹಾನಿಯಾಗಲಿದೆ. ಆದ್ದರಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದರು.

‘ಕೇರಳಕ್ಕೆ ಬಂಡಿಪುರ ರಾಷ್ಟ್ರೀಯ ಉದ್ಯಾನದ ಮೂಲಕ ರಾತ್ರಿ ವೇಳೆ ಎರಡು ಬಸ್‌ಗಳು ಸಂಚರಿಸುತ್ತಿವೆ. ನಾಲ್ಕು ಬಸ್‌ಗಳಿಗೆ ಅನುಮತಿ ನೀಡುವಂತೆ ಕೋರಿದರು. ಇದಕ್ಕೂ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT