ಬುಧವಾರ, ಡಿಸೆಂಬರ್ 7, 2022
21 °C
ಕುರುಬ ಸಮಾಜದ ಮುಖಂಡರ ಒತ್ತಾಯ

ಮಲ್ಕಾಪುರೆ ಮುಂದುವರಿಸಿ, ಈಶ್ವರಪ್ಪಗೆ ಸಚಿವ ಸ್ಥಾನ ಕೊಡಿ: ಕುರುಬ ಸಮಾಜದವರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿಯಾಗಿ ರಘುನಾಥರಾವ್‌ ಮಲ್ಕಾಪುರೆ ಅವರನ್ನೇ ಮುಂದುವರಿಸಬೇಕು ಮತ್ತು ಶಾಸಕ ಕೆ.ಎಸ್‌. ಈಶ್ವರಪ್ಪ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕನಕಶ್ರೀ ಚಾರಿಟಬಲ್‌ ಟ್ರಸ್ಟ್‌ ಪದಾಧಿಕಾರಿಗಳು ಮತ್ತು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

‘ಸಾಂವಿಧಾನಿಕ ಹುದ್ದೆಯಾದ ವಿಧಾನಸಭಾ ಅಧ್ಯಕ್ಷ ಸ್ಥಾನ ಮತ್ತು ವಿಧಾನ ಪರಿಷತ್‌ ಸಭಾಪತಿ ಹುದ್ದೆ ಇದುವರೆಗೂ ಕುರುಬ ಸಮಾಜದ ಮುಖಂಡರಿಗೆ ಲಭಿಸಿಲ್ಲ. ಹೀಗಾಗಿ, ಪ್ರಸ್ತುತ ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿರುವ ರಘುನಾಥರಾವ್‌ ಮಲ್ಕಾಪುರೆ ಅವರನ್ನೇ ಮುಂದುವರಿಸಬೇಕು’ ಎಂದು ಟ್ರಸ್ಟ್‌ ಅಧ್ಯಕ್ಷ ಟಿ.ಬಿ. ಬಳಗಾವಿ ಮತ್ತು ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ (ಹಿಂದ) ಅಧ್ಯಕ್ಷ ಕೆ. ಮುಕುಡಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬಿಜೆಪಿಯ ಹಿರಿಯ ಮುಖಂಡರಾಗಿರುವ ರಘುನಾಥ್‌ರಾವ್‌ ಮಲ್ಕಾಪುರೆ ಅವರ ಸದಸ್ಯತ್ವದ ಅವಧಿ ಮುಗಿಯುವವರೆಗೂ ಸಭಾಪತಿಯಾಗಿ ಮುಂದುವರಿಸಬೇಕು. ಜತೆಗೆ, ಆರೋಪಗಳಿಂದ ಮುಕ್ತರಾಗಿರುವ ಕೆ.ಎಸ್‌. ಈಶ್ವರಪ್ಪ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು. ಈ ಮೂಲಕ ರಾಜ್ಯದ ಮೂರನೇ ಅತಿ ದೊಡ್ಡ ಸಮುದಾಯವಾದ ಕುರುಬ ಸಮಾಜವನ್ನು ಬಿಜೆಪಿಯತ್ತ ಸೆಳೆಯಲು ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಈಶ್ವರಪ್ಪ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಈಶ್ವರಪ್ಪ ಸಚಿವ ಸ್ಥಾನ ನೀಡುವುದರಿಂದ ಪಕ್ಷಕ್ಕೆ ಬಲ ದೊರೆಯುತ್ತದೆ. 224 ಕ್ಷೇತ್ರಗಳಲ್ಲಿ 194 ಕ್ಷೇತ್ರಗಳಲ್ಲಿ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯಲು ಈ ಇಬ್ಬರು ನಾಯಕರಿಗೆ ಮಹತ್ವದ ಸ್ಥಾನಗಳನ್ನು ನೀಡಬೇಕು. ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಸಲ್ಲಿಸುತ್ತೇವೆ. ಆದರೆ, ಪ್ರತಿಭಟನೆ ಮಾಡುವುದಿಲ್ಲ’ ಎಂದು ಮುಕುಡಪ್ಪ ಹೇಳಿದರು.

‘ಸಿದ್ದರಾಮಯ್ಯಗೆ ಸಮುದಾಯದ ಬೆಂಬಲ ಇಲ್ಲ’:

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಿಂದೆ ಇಡೀ ಕುರುಬ ಸಮುದಾಯ ಇದೆ ಎನ್ನುವುದು ತಪ್ಪು ಕಲ್ಪನೆ’ ಎಂದು ಕೆ. ಮುಕುಡಪ್ಪ ತಿಳಿಸಿದರು.

‘ದಾವಣಗೆರೆಯಲ್ಲಿ ನಡೆದ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ ಮಾತ್ರಕ್ಕೆ ಕುರುಬ ಸಮುದಾಯ ಸಿದ್ದರಾಮಯ್ಯ ಜತೆ ಇದೆ ಎಂದು ಅರ್ಥೈಸಿಕೊಳ್ಳಬಾರದು. ಜನ ಸೇರಿಸುವುದರಿಂದ ಬಲ ಇದೆ ಎಂದರ್ಥವಲ್ಲ. ಬಹುಸಂಖ್ಯಾತ ಕುರುಬರು ಈಗ ಈಶ್ವರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ’ ಎಂದು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು