ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಕೋಲಾಹಲ: ವಿಧಾನ ಪರಿಷತ್ ಕಲಾಪ‌ ಸೋಮವಾರಕ್ಕೆ ಮುಂದೂಡಿಕೆ

Last Updated 19 ಮಾರ್ಚ್ 2021, 7:06 IST
ಅಕ್ಷರ ಗಾತ್ರ

ಬೆಂಗಳೂರು: ಸಭಾಪತಿ‌ ನೇತೃತ್ವದಲ್ಲಿ ನಡೆದ ಸಂಧಾನ‌ ಸಭೆ ಸಫಲವಾಗಿಲ್ಲ. ಸದನ ಸಮಿತಿ ರಚನೆಗೆ ಸರ್ಕಾರ ನಿರಾಕರಿಸಿದ್ದು, ಜೆಡಿಎಸ್ ಧರಣಿಯಿಂದ ಸದನದಲ್ಲಿ ಕೋಲಾಹಲ‌ ಮುಂದುವರಿಯಿತು. ಕಲಾಪವನ್ನು ಮತ್ತೆ ಸೋಮವಾರಕ್ಕೆ ಮುಂದೂಡಲಾಯಿತು.

ಸಂಧಾನ ಸಭೆಯ ಬಳಿಕ‌ ಮತ್ತೆ ಕಲಾಪ ಆರಂಭವಾದಾಗ ಸ್ಪಷ್ಟನೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, 'ನಮ್ಮ ಅವಧಿಯಲ್ಲಿ ಯಾವುದೇ ಲೋಪ ಆಗಿಲ್ಲ.‌ 2002ರಲ್ಲಿ ಒಂದೇ ಬಾರಿಗೆ 300 ಕಾಲೇಜುಗಳಿಗೆ ಅನುಮತಿ ನೀಡಲಾಗಿತ್ತು. ಆಗ ಯಾರೂ ತನಿಖೆಗೆ ಆಗ್ರಹಿಸಿರಲಿಲ್ಲ' ಎಂದರು.

'ಭ್ರಷ್ಟಾಚಾರ ನಡೆದಿರುವುದಕ್ಕೆ ದಾಖಲೆ ನೀಡಲಿ. ಲೋಪ ಎಲ್ಲಿ ಆಗಿದೆ ಎಂದು ಹೇಳಲಿ' ಎಂದು ಸವಾಲು ಹಾಕಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, 'ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 62 ಸಂಸ್ಥೆಗಳ ಅರ್ಜಿಗಳನ್ನು ಶಿಫಾರಸು ಮಾಡಿತ್ತು. ಹಣ ಕೊಟ್ಟ 45 ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ದೊಡ್ಡ ಭ್ರಷ್ಟಾಚಾರ ನಡೆದಿದೆ' ಎಂದು ಆರೋಪಿಸಿದರು.

'ಹಣ ವಸೂಲಿ ಮಾಡಲು ಸದನ ಸಮಿತಿ ರಚಿಸುವಂತೆ ಕೇಳುತ್ತಿದ್ದಾರೆ' ಎಂದು ಸುಧಾಕರ್ ಪ್ರತ್ಯುತ್ತರ ನೀಡಿದರು.

ಮಾತಿಗೆ ಮಾತು ಬೆಳೆದು ಕೋಲಾಹಲ‌ ಸೃಷ್ಟಿಯಾಯಿತು. ಸದನ ಸಮಿತಿ ರಚಿಸಬೇಕೆ? ಬೇಡವೆ? ಎಂಬುದರ ಕುರಿತು ಮತ ವಿಭಜನೆ ನಡೆಸುವಂತೆ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ‌ ಸಲಹೆ ನೀಡಿದರು.

ಸಭಾಧ್ಯಕ್ಷರ ಪೀಠದ ಎದುರು ಮರಿತಿಬ್ಬೇಗೌಡ ಅವರು ಏರು ದನಿಯಲ್ಲಿ ಮಾತನಾಡತೊಡಗಿದರು. ಬಿಜೆಪಿ ಸದಸ್ಯರು ಜೋರಾಗಿ ಪ್ರತ್ಯುತ್ತರ ನೀಡಲಾರಂಭಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣದಿಂದ ಸಭಾಪತಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT