ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪಗೆ ‘ಬಿ’ ರಿಪೋರ್ಟ್‌

Last Updated 20 ಜುಲೈ 2022, 19:43 IST
ಅಕ್ಷರ ಗಾತ್ರ

ಉಡುಪಿ: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್‌ ಪಾಟೀಲ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಿ’ ರಿಪೋರ್ಟ್‌ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಮುಖ ಆರೋಪಿಯಾಗಿದ್ದರು.

ಸಾಕ್ಷ್ಯಾಧಾರಗಳ ಕೊರತೆಯಿಂದ ಈಶ್ವರಪ್ಪ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಉಡುಪಿ ಇನ್‌ಸ್ಪೆಕ್ಟರ್‌ ಪ್ರಮೋದ್ ಕುಮಾರ್‌ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ.

ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ₹ 4 ಕೋಟಿ ವೆಚ್ಚದ ಕಾಮಗಾರಿ ಬಿಲ್ ಮಂಜೂರು ಮಾಡಲು ಈಶ್ವರಪ್ಪ 40 ಪರ್ಸೆಂಟ್ ಕಮಿಷನ್‌ಗೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಏ.12ರಂದು ಸಂತೋಷ್ ಪಾಟೀಲ, ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು.

ಮೃತ ಸಂತೋಷ್‌ ಪಾಟೀಲ ಸಂಬಂಧಿಗಳು ನೀಡಿದ ದೂರಿನಂತೆ ಸೆಕ್ಷನ್‌ 306, 334 ಅಡಿ ಈಶ್ವರಪ್ಪ (ಎ 1), ಬಸವರಾಜ್ (ಎ 2), ರಮೇಶ್ (ಎ 3) ವಿರುದ್ಧ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಪ್ರತಿಭಟಿಸಿದ್ದ ಸಂಬಂಧಿಗಳು: ‘ಸಂತೋಷ್ ಆತ್ಮಹತ್ಯೆಗೆ ಕಾರಣವಾಗಿರುವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗುವವರೆಗೂ ಶವ ಸಾಗಿಸುವುದಿಲ್ಲ’ ಎಂದು ಸಂಬಂಧಿಗಳು ಪ್ರಕರಣ ನಡೆದಾಗ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು. ಪ್ರಕರಣ ದಾಖಲಾದ ಬಳಿಕ
ಶವವನ್ನು ಹುಟ್ಟೂರಿಗೆ ಕೊಂಡೊಯ್ದಿದ್ದರು. ಬಳಿಕ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

‘ಬಿ’ ರಿಪೋರ್ಟ್ ಹಾಕಿ ಅನ್ಯಾಯ: ಪತ್ನಿ ಆಕ್ರೋಶ

ಬೆಳಗಾವಿ: ‘ನಮ್ಮ ಆತಂಕ ಕೊನೆಗೂ ನಿಜವೇ ಆಯಿತು. ನನ್ನ ಪತಿಯ ಸಾವಿಗೆ ಪ್ರಮುಖ ಕಾರಣರಾದ ಕೆ.ಎಸ್.ಈಶ್ವರಪ್ಪ ಅವರು ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ. ಅವರ ಮೇಲೆ ‘ಬಿ’ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಸುಮ್ಮನಿರುವುದಿಲ್ಲ’ ಎಂದು ಸಂತೋಷ್‌ ಪಾಟೀಲ ಅವರ ಪತ್ನಿ ರೇಣುಕಾ ಪ್ರತಿಕ್ರಿಯಿಸಿದರು.

‘ಪೊಲೀಸರು ತನಿಖೆ ಮಾಡಿ ನ್ಯಾಯ ಕೊಡಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಬುಧವಾರ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

‘ತನಿಖೆ ಮೇಲೆ ಈಶ್ವರಪ್ಪ ಪ್ರಭಾವ ಬಳಸುತ್ತಿದ್ದಾರೆ, ನಿಷ್ಪಕ್ಷಪಾತವಾಗಲಿ ಎಂದು ಕೋರಿ ಈಚೆಗಷ್ಟೇ ರಾಜ್ಯಪಾಲರಿಗೂ ಪತ್ರ ಬರೆದು ಬೇಡಿಕೊಂಡಿದ್ದೇನೆ. ನನ್ನ ಪತಿಯ ಮೊಬೈಲ್‌ನಲ್ಲಿ ಈಶ್ವರಪ್ಪ ವಿರುದ್ಧದ ಎಲ್ಲ ಸಾಕ್ಷ್ಯಗಳಿದ್ದವು. ಆದರೆ, ಪೊಲೀಸರು ಈವರೆಗೂ ಆ ಮೊಬೈಲ್ ನಮ್ಮ ಕೈಗೆ ಕೊಟ್ಟಿಲ್ಲ. ನನ್ನ ಪತಿಯ ಸಹೋದರ ತನಿಖಾಧಿಕಾರಿ ಹಾಗೂ ಎಸ್ಪಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಉಡುಪಿ ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅನ್ಯಾಯ ಮಾಡಿದ್ದಾರೆ ಎಂದೆಲ್ಲವನ್ನೂ ಪತ್ರದಲ್ಲಿ ವಿವರಿಸಿರುವೆ’ ಎಂದು ರೇಣುಕಾ ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT