ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್; ಸಾಕ್ಷಿಗಳಿವೆ –ಗುತ್ತಿಗೆದಾರರ ಸಂಘ

ಆರೋಪ ಪುನರುಚ್ಚರಿಸಿದ ಕೆಂಪಣ್ಣ
Last Updated 3 ಜನವರಿ 2022, 10:05 IST
ಅಕ್ಷರ ಗಾತ್ರ

ಕಲಬುರಗಿ: ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇ 40ರಷ್ಟು ಪರ್ಸೆಂಟೇಜ್ ನಡೆಯುತ್ತಿದೆ. ಬಹುತೇಕ ಸಚಿವರು, ಶಾಸಕರು ಭ್ರಷ್ಟರಾಗಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ಸಾಕ್ಷಿಗಳಿವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು ತಿಂಗಳ ಹಿಂದೆ ಕಮಿಷನ್ ಕುರಿತಾಗಿ ನಾವು ಪ್ರಧಾನಿಗೆ ಪತ್ರ ಬರೆದಿದ್ದೆವು. ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಭೇಟಿಗೆ ನಾಲ್ಕು ಬಾರಿ ಸಮಯ ಕೇಳಿದ್ದೆವು. ಅವರು ಸಮಯ ಕೊಡಲಿಲ್ಲ.‌ ಹೀಗಾಗಿ ಅನಿವಾರ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇವು. ಪ್ರಧಾನಿ ಕಚೇರಿಯಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

‘ರಾಜ್ಯದ ವಿವಿಧ ಕಾಮಗಾರಿಗಳಿಂದ ಸ್ಥಳೀಯ ಗುತ್ತಿಗೆದಾರರನ್ನು ಹೊರಗಿಟ್ಟು ಬೇರೆ ರಾಜ್ಯದವರಿಗೆ ಗುತ್ತಿಗೆ ಕೊಡಲಾಗುತ್ತಿದೆ. ಇದರಿಂದ ಗುತ್ತಿಗೆದಾರರು ಜೀವನ ಮಾಡಲು ಕಷ್ಟವಾಗುತ್ತಿದೆ. ಕಂದಾಯ ಆರ್.ಅಶೋಕ್ ದುರಹಂಕಾರಿ ಸಚಿವ. ನಾವು ಕಾಂಗ್ರೆಸ್ ಪರವಾಗಿರುವವರು ಅಂತಾ ಹೇಳುತ್ತಿದ್ದಾರೆ. ನಾವು ಯಾವುದೇ ಪಕ್ಷದ ಪರವಾಗಿ ಹೋರಾಟ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈಗಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮನ್ನು ಕರೆದು ಮಾತನಾಡದಿದ್ದರೆ ಪ್ರಧಾನಿ ಬಳಿ ಹೋಗಿ ನಮ್ಮ ಸಮಸ್ಯೆ ಹೇಳಿಕೊಳ್ಳುತ್ತೇವೆ. ಅಧಿಕಾರಿಗಳು ಕಾನೂನು ಮರೆತು ಬಿಟ್ಟಿದ್ದಾರೆ. ಶಾಸಕರು, ಸಚಿವರು ಹೇಳಿದವರಿಗೆ ಮಾತ್ರ ಗುತ್ತಿಗೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ಕಮಿಷನ್ ವ್ಯವಹಾರದ ಬಗ್ಗೆ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು. ಸ್ವತಂತ್ರ ತನಿಖೆ ನಡೆಸಿದರೆ ಎಲ್ಲಾ ದಾಖಲಾತಿಗಳನ್ನು ನೀಡಲು ಸಿದ್ಧರಿದ್ದೇವೆ. ರಾಜ್ಯದಲ್ಲಿ ₹ 22 ಸಾವಿರ ಕೋಟಿ ಬಿಲ್ ಬಾಕಿ ಇದೆ. ಮಾತ್ರ ಇಷ್ಟ ಬಂದವರಿಗೆ ಬಿಲ್ ಪಾವತಿ ಮಾಡುತ್ತಿದ್ದಾರೆ. ಮೊದಲು ಶೇ 10ರಿಂದ 15ರಷ್ಟು ಪರ್ಸೆಂಟೇಜ್ ನಡೆಯುತ್ತಿತ್ತು. ಆದರೆ, 2019ರ ನಂತರ ಪರ್ಸೆಂಟೇಜ್ ಪ್ರಮಾಣ ದಿಢೀರ್ ಶೇ 40ಕ್ಕೆ ಏರಿಕೆಯಾಗಿದೆ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಶೇಗಜಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT