ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಂಘರ್ಷ ಸಮಿತಿ ಬಣಗಳ ವಿವಾದಕ್ಕೆ ತೆರೆ

ಎನ್‌.ಗಿರಿಯಪ್ಪ, ಗುರುಮೂರ್ತಿ ನೇತೃತ್ವದ ಬಣವೇ ಮೂಲ ಸಂಘಟನೆ
Last Updated 19 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಶಿವಮೊಗ್ಗ: ಎನ್‌.ಗಿರಿಯಪ್ಪ, ಎಂ.ಗುರುಮೂರ್ತಿ, ಡಾ.ಸಣ್ಣರಾಮ ನೇತೃತ್ವದ ಬಣವೇ ಮೂಲ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ ಎಂದು ಭದ್ರಾವತಿ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದ್ದು, ಇತರೆ ಸಂಘಟನೆಗಳು ಹೆಸರು ಬಳಸುವುದರ ಮೇಲೆ ನಿರ್ಬಂಧ ವಿಧಿಸಿದೆ.

ರಾಜ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರಲ್ಲಿ ಹಲವು ಬಣಗಳಿವೆ. ಇತರೆ ಬಣಗಳು ಹೆಸರು ಬಳಸುವುದು, ಸಮಾವೇಶ ನಡೆಸು
ವುದು, ಪತ್ರ ವ್ಯವಹಾರ, ಸಾಮಾನ್ಯ ಸಭೆ ಕರೆಯುವುದು ಕಾನೂನುಬಾಹಿರ ಎಂದು ಆದೇಶಿಸಲಾಗಿದೆ.

ಭದ್ರಾವತಿಯ ಸರ್‌ ಎಂ.ವಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪ್ರೊ.ಬಿ.ಕೃಷ್ಣಪ್ಪ ಅವರು ಸಮಾಜವಾದಿ ಯುವಜನ ಸಭಾದಿಂದ ಹೊರಬಂದು 1974ರಲ್ಲಿ ದಲಿತ ಲೇಖಕರು, ಕಲಾವಿದರ (ದಲೇಕ) ಸಮಾವೇಶ ನಡೆಸಿದ್ದರು. ಸಮಾವೇಶದ ನಿರ್ಣಯದಂತೆ ಅಸ್ಪೃಶ್ಯತೆ, ಶೋಷಣೆ, ಕಡೆಗಣನೆಗೆ ಒಳಗಾದ ಜನರು, ನೊಂದವರು, ಬಡವರ ಪರ ಹೋರಾಟ ನಡೆಸಲು, ಅವರ ಬದುಕಿಗೆ ಬೆಳಕಾಗಲು ದಲಿತ ಸಂಘರ್ಷ ಸಮಿತಿ ಸ್ಥಾಪಿಸಲಾಗಿತ್ತು. ಈ ಸಮಿತಿ 1975ರಲ್ಲಿ ನೋಂದಣಿಯಾಗಿತ್ತು. ಮೊದಲ ಅಧ್ಯಕ್ಷರಾಗಿ ಭದ್ರಾವತಿ ವಿಐಎಸ್‌ಎಲ್‌ ಕಾರ್ಮಿಕ ಮುಖಂಡ ಗಿರಿಯಪ್ಪ, ಕಾರ್ಯ ದರ್ಶಿಯಾಗಿ ಪ್ರೊ.ಕೃಷ್ಣಪ್ಪ ನೇಮಕಗೊಂ ಡಿದ್ದರು. ಮೊದಲು ಪರಿಶಿಷ್ಟ ಜಾತಿಯ ಹಾಸ್ಟೆಲ್‌ಗಳಿಗೆ ಸೀಮಿತವಾಗಿದ್ದ ಕಾರ್ಯಚಟುವಟಿಕೆ ನಂತರ ರಾಜ್ಯದ ನಗರ, ಪಟ್ಟಣ, ಹಳ್ಳಿಗಳಿಗೂ ವಿಸ್ತರಿಸಿದ್ದು ಈಗ ಇತಿಹಾಸ.

1996ರ ನಂತರ ಕೃಷ್ಣಪ್ಪ ಅವರ ನೇತೃತ್ವದ ದಸಂಸ ಬಿಎಸ್‌ಪಿ ಜತೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದನ್ನು ವಿರೋಧಿಸಿ ಡಿ.ಜಿ.ಸಾಗರ್ ನೇತೃತ್ವದಲ್ಲಿ ಕೆಲವರು ಪ್ರತ್ಯೇಕ ಬಣ ರಚಿಸಿಕೊಂಡಿದ್ದರು. ಅಲ್ಲಿಂದ ಆರಂಭವಾದ ವಿಘಟನೆಯ ಪರ್ವ ನಿರಂತರವಾಗಿ ಮುಂದುವರಿದು ಇಂದು ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಹಲವು ಬಣಗಳು ಅಸ್ತಿತ್ವದಲ್ಲಿವೆ. ಮೊದಲು ಸಮಿತಿಯ ಪದಾಧಿಕಾರಿಗಳನ್ನು ಅಧ್ಯಕ್ಷ, ಕಾರ್ಯದರ್ಶಿ ಎಂದೇ ನಮೂದಿಸಲಾಗುತ್ತಿತ್ತು. ನಂತರ ಸಮಿತಿಯ ಬೈಲಾಗೆ ತಿದ್ದುಪಡಿ ತಂದು ಸಂಚಾಲಕ ಪದ ಬಳಕೆ ಆರಂಭಿಸಲಾಗಿತ್ತು.

ಸಮಿತಿಯ ಹಲವು ಬಣಗಳು ಒಗ್ಗೂಡಿ ದಾವಣಗೆರೆ ಯಲ್ಲಿ 2009ರಲ್ಲಿಸಾಮಾನ್ಯ ಸಭೆ, 2011ರಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಿದ್ದವು. ಸಮಾವೇಶದ ನಂತರ ತಮ್ಮದೇ ನಿಜವಾದ ದಲಿತ ಸಂಘರ್ಷ ಸಮಿತಿ ಎಂದು ನವೀಕರಣಕ್ಕೆ ನೋಂದಣಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಮೂಲ ಸಮಿತಿ ವಿವಾದ ಬಗೆಹರಿಸಿಕೊಳ್ಳಲು ನ್ಯಾಯಾಲಯದ ಮೊರೆಹೋಗಲು ಸೂಚಿಸಿದ್ದರು. ನಂತರ ಭದ್ರಾವತಿ ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು ನ್ಯಾಯಾಧೀಶರಾದ ಸ್ನೇಹಾ ಆದೇಶ ಪ್ರಕಟಿಸಿದ್ದಾರೆ. ಪ್ರತಿವಾದಿಗಳಾದ ಹೆಣ್ಣೂರು ಶ್ರೀನಿವಾಸ್, ವೆಂಕಟಗಿರಿಯಯ್ಯ, ಭದ್ರಾವತಿ ಸತ್ಯ ಮತ್ತಿತರರ ಮನವಿಯನ್ನು ತಿರಸ್ಕರಿಸಿದ್ದಾರೆ.

***

ಸಂಸ್ಥಾಪಕ ಅಧ್ಯಕ್ಷರಾಗಿದ್ದ ಗಿರಿಯಪ್ಪ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸಿದೆವು. ಈಗ ಅವರಿಲ್ಲ. ನನ್ನ ನೇತೃತ್ವದಲ್ಲೇ ಸಮಿತಿ ಮುಂದುವರಿಯಲಿದೆ

- ಎಂ.ಗುರುಮೂರ್ತಿ, ರಾಜ್ಯ ಸಂಚಾಲಕ, ಕದಸಂಸ

ನ್ಯಾಯಾಲಯಕ್ಕೆ ಸರಿಯಾಗಿ ವಾಸ್ತವ ಮನವರಿಕೆ ಮಾಡಿಕೊಡದ ಕಾರಣ ಹಿನ್ನೆಡೆಯಾಗಿದೆ. ಎಲ್ಲರ ಜತೆ ಚರ್ಚಿಸಿ ಮೇಲ್ಮನವಿ ಸಲ್ಲಿಸುವ ಕುರಿತು ಶೀಘ್ರ ನಿರ್ಧರಿಸಲಾಗುವುದು

- ಆಲೂರು ನಿಂಗರಾಜ್ದಾ, ದಾವಣಗೆರೆ ದಲಿತ ಸಮಾವೇಶದ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT