ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಲು ಶಿಫಾರಸು

Last Updated 25 ಆಗಸ್ಟ್ 2020, 18:20 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಕೋವಿಡ್‌ ನಿರ್ವಹಣೆ ಕುರಿತ ಸರ್ಕಾರದ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.

ದೆಹಲಿಯಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 70,871 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ ಸರಾಸರಿ 34,659 ಜನರ ಪರೀಕ್ಷೆ ನಡೆಯುತ್ತಿದ್ದು, ಇದನ್ನು ಕ್ರಮೇಣ ಒಂದು ಲಕ್ಷಕ್ಕೆ ಹೆಚ್ಚಿಸಬೇಕು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಪರೀಕ್ಷೆಗಳನ್ನು ಹೆಚ್ಚಿಸಿ, ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಮಾಡಿದರೆ ಮಾತ್ರ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಜರ್ಮನಿಯಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 1.2 ಲಕ್ಷ ಮಂದಿಯ ಪರೀಕ್ಷೆ ಮಾಡಲಾಗುತ್ತಿದೆ. ದಕ್ಷಿಣ ಕೊರಿಯಾ, ನ್ಯೂಜಿಲೆಂಡ್‌ನಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಿ, ಸೋಂಕು ನಿಯಂತ್ರಣಕ್ಕೆ ತರಲಾಗಿದೆ.

ಸೋಂಕಿನಿಂದ ಗಂಡಾಂತರಕ್ಕೆ ಒಳಗಾಗುವ ಮೂರು ವಲಯಗಳನ್ನು ಗುರುತಿಸಲಾಗಿದ್ದು, ಇವರಿಗೆ ಆದ್ಯತೆ ನೀಡಿ ಪರೀಕ್ಷೆ ನಡೆಸಬೇಕು. ಜತೆಗೆ ಜನರು ಸೋಂಕು ಪರೀಕ್ಷೆ ಕುರಿತು ಹೊಂದಿರುವ ತಪ್ಪು ಕಲ್ಪನೆಗಳನ್ನು ದೂರವಾಗಿಸಲು ಜಾಗೃತಿ ಕಾರ್ಯಕ್ರಮಕ್ಕೆ ಕ್ರಮಕೈಗೊಳ್ಳಬೇಕು ಎಂದು ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್ ಸಚ್ಚಿದಾನಂದ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಒಳಗೊಂಡ ತಜ್ಞರ ಸಮಿತಿ ತಿಳಿಸಿದೆ.

* ಆದ್ಯತಾ ವಲಯ 1- ತೀವ್ರ ಉಸಿರಾಟ ಸಮಸ್ಯೆಹೊಂದಿರುವ ರೋಗಿಗಳು, ವಿಷಮಶೀತ ಜ್ವರ, ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಅವರ ಸಂಪರ್ಕಿತರು.

* ಆದ್ಯತಾ ವಲಯ 2- ಕಂಟೈನ್‌ಮೆಂಟ್‌ ವಲಯದ ನಿವಾಸಿಗಳು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು, ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವವರು.

* ಆದ್ಯತಾ ವಲಯ 3- ಗರ್ಭಿಣಿಯರು, ಆಸ್ಪತ್ರೆಗಳ ಒಪಿಡಿಗೆ ಬರುವವರು, ತರಕಾರಿ ಮಾರುಕಟ್ಟೆ ವ್ಯಾಪಾರಿಗಳು, ಬಸ್ ನಿರ್ವಾಹಕರು, ಆಟೋಚಾಲಕರು, ಚಿಲ್ಲರೆ ಅಂಗಡಿ, ಬಸ್, ರೈಲು ನಿಲ್ದಾಣ ಬಳಿಯ ವ್ಯಾಪಾರಿಗಳು ಹಾಗೂ ಪೌರ ಕಾರ್ಮಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT