ಬುಧವಾರ, ಜೂನ್ 23, 2021
30 °C
ನಗರ ಕೇಂದ್ರಿತ ಮಾರ್ಗಸೂಚಿ ಗ್ರಾಮೀಣರಿಗೆ ಫಜೀತಿ

ಕೋವಿಡ್‌: ದೂರದೃಷ್ಟಿ ಇಲ್ಲದ ಲಾಕ್‌ಡೌನ್ ಮಾರ್ಗಸೂಚಿಗೆ ಜನರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಘೋಷಿಸುವಾಗ ನಗರ–ಪಟ್ಟಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರ್ಗಸೂಚಿ ರೂಪಿಸಿದ್ದರಿಂದಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಜನ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.

ಮಲೆನಾಡು, ಕರಾವಳಿ ಮತ್ತು ಬಯಲುಸೀಮೆಯಲ್ಲಿರುವ ಗ್ರಾಮೀಣ ಪ್ರದೇಶದ ಜನರು ತಮ್ಮ ದೈನಂದಿನ ಅಗತ್ಯಗಳಿಗೆ ಸಮೀಪದ ಪಟ್ಟಣಗಳನ್ನೇ ಅವಲಂಭಿಸಿದ್ದಾರೆ. ದಿನಸಿ, ಹಣ್ಣು–ತರಕಾರಿ ಮತ್ತು ಕೃಷಿ ಉಪಕರಣಗಳು, ಬಿತ್ತನೆ ಬೀಜ ರಸಗೊಬ್ಬರಗಳಿಗೂ ಪಟ್ಟಣಗಳಲ್ಲಿರುವ ಮಳಿಗೆಗಳಿಗೇ ಹೋಗಬೇಕು.

ಬೆಳಿಗ್ಗೆ 6 ರಿಂದ 10 ರ ಒಳಗೇ ಹೋಗಿ ನಡೆದುಕೊಂಡೇ ಹೋಗಿ ಅವುಗಳನ್ನು ಖರೀದಿಸಿಕೊಂಡು ಬರಬೇಕು. ವಾಹನಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಪಟ್ಟಣಗಳಿಗೆ ಹತ್ತಾರು ಕಿಲೊಮೀಟರ್‌ಗಳಷ್ಟು ನಡೆದುಕೊಂಡು ಹೋಗಿ ಅಗತ್ಯ ಸಾಮಗ್ರಿಗಳನ್ನು ತರಲು ಸಾಧ್ಯವಿಲ್ಲ. ಸಣ್ಣ– ಪುಟ್ಟ ವಾಹನಗಳಲ್ಲಿ ತರಲು ಅವಕಾಶ ನೀಡುವುದು ಸೂಕ್ತ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ನಿವಾಸಿಗಳು.

ಮುಂಗಾರು ಬೇಸಾಯಕ್ಕೂ ತೊಡಕು: ಜೂನ್ ಮೊದಲ ವಾರ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಸಾಕಷ್ಟು ಕಡೆಗಳಲ್ಲಿ ರೈತರು ಕೃಷಿ ಚಟುವಟಿಕೆ ಆರಂಭಿಸುವ ಸಿದ್ಧತೆಯಲ್ಲಿ ಇದ್ದಾರೆ. ಹೊಲ–ಗದ್ದೆಗಳನ್ನು ಬಿತ್ತನೆಗೆ ಹದ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಯಂತ್ರೋಪಕರಣಗಳು, ಬಿತ್ತನೆ ಬೀಜ, ರಸಗೊಬ್ಬರವನ್ನು ಪಟ್ಟಣಗಳಿಂದಲೇ ತರಬೇಕು. ಸರ್ಕಾರ ಕೃಷಿ ಚಟುವಟಿಕೆಗೆ ಅವಕಾಶ ನೀಡಿದೆ. ಆದರೆ, ಅಗತ್ಯ ಪರಿಕರಗಳನ್ನು ವಾಹನಗಳಲ್ಲಿ ತರಲು ಅವಕಾಶ ನೀಡದೇ ಇರುವುದು ಸರಿಯಲ್ಲ ಎನ್ನುತ್ತಾರೆ ಶೃಂಗೇರಿಯ ಮೋಹನ್.

ಸರ್ಕಾರದ ಮಾರ್ಗಸೂಚಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಸ್ಪಷ್ಟಪಡಿಸಬೇಕು ಮತ್ತು ಪೊಲೀಸರಿಗೂ ಅಗತ್ಯ ಸೂಚನೆಗಳನ್ನು ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಒಯ್ಯಬಹುದು ಎಂದು ಹೇಳಿದ್ದರೂ, ಪೊಲೀಸರು ಒಯ್ಯಲು ಅವಕಾಶ ನೀಡುವುದಿಲ್ಲ. ಸಾರಾಸಗಟು ಲಾಠಿ ಬೀಸಿ ಅಟ್ಟುತ್ತಾರೆ ಎಂದು ಬ್ರಹ್ಮಾವರದ ರವೀಂದ್ರ ರಾವ್ ಹೇಳಿದರು.

ಆಸ್ಪತ್ರೆ, ಔಷಧಕ್ಕೂ ತೊಡಕು: ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಮತ್ತು ಔಷಧ ತರಲು ಹೋಗುವವರಿಗೆ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವೈದ್ಯರ ಚೀಟಿ ಒಯ್ದರೆ ಬಿಡುತ್ತಾರೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಾಹನಗಳು ಸಿಗುವುದೇ ಕಷ್ಟ.  ಆದ್ದರಿಂದ, ಆಸ್ಪತ್ರೆ ಮತ್ತು ಔಷಧ ತರಲು ಹೋಗುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳದಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಬೀರೂರಿನ ಶಿವಕುಮಾರಸ್ವಾಮಿ ಕೋರಿದರು.

ಎಷ್ಟು ಹೊತ್ತುಕೊಂಡು ಬರಲುಸಾಧ್ಯ?: ವಯಸ್ಸಾದವರು ಮಾತ್ರವಲ್ಲ, ಯುವಕರಾದರೂ ಸರಿ, ನಡೆದುಕೊಂಡು ಹೋಗಿ ಎಷ್ಟು ಸಾಮಾನು ತರಲು ಸಾಧ್ಯ? 5 ರಿಂದ 10 ಕೆ.ಜಿ ಹೊತ್ತುಕೊಂಡು ತರಲು ಸಾಧ್ಯವೇ? ನಿಯಮ ಮಾಡುವಾಗ ಬುದ್ಧಿ ಇರಬೇಕಲ್ಲ ಎಂದು ಅಶ್ವತ್ಥನಾರಾಯಣ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.

ಅಂತ್ಯ ಸಂಸ್ಕಾರಕ್ಕೂ ಬಿಡುತ್ತಿಲ್ಲ: ಕುಟುಂಬದವರಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅಂತ್ಯ ಸಂಸ್ಕಾರಕ್ಕೆ ಹೋಗಲು ಪೊಲೀಸರು ಬಿಡುತ್ತಿಲ್ಲ. ಕೋವಿಡೇತರ ಕಾರಣದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ 5 ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳಲು ಅವಕಾಶ ನೀಡಲು ಸಮಸ್ಯೆ ಏನು ಎಂಬುದು ಅರ್ಥವಾಗುತ್ತಿಲ್ಲ. ಹೆಣ ಹೋರುವುದಕ್ಕೆ ನಾಲ್ಕು ಜನ ಬೇಕು. ಹಾಗಿರುವಾಗ ಐದು ಜನಕ್ಕೆ ಸೀಮಿತಗೊಳಿಸಿದರೆ ಹೇಗೆ ಸಾಧ್ಯ ಎಂದು ಸಾರ್ವಜನಿಕರ ಪ್ರಶ್ನೆ.

ಪೋಷಕರು ಮೃತಪಟ್ಟರೆ ಅವರ ಮಕ್ಕಳಾದರೂ ಪಾಲ್ಗೊಳ್ಳಬೇಕು. ಅಂತರ ಜಿಲ್ಲೆ ಪ್ರಯಾಣ ನಿರ್ಬಂಧಿಸಿರುವುದರಿಂದ ಅಂತ್ಯಕ್ರಿಯೆಗೂ ಹೋಗಲಾರದ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಪಾಸ್‌ ನೀಡುವ ವ್ಯವಸ್ಥೆಯನ್ನಾದರೂ ಜಾರಿಗೊಳಿಸಲಿ ಎಂಬ ಒತ್ತಾಯವೂ ಸಾರ್ವಜನಿಕರದ್ದಾಗಿದೆ.

ಸರ್ಕಾರ ಹೇಳುವುದೇನು?
ಕೃಷಿ ಮತ್ತು ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ಇದಕ್ಕೆ ಪೂರಕವಾಗಿ ನಿರ್ಬಂಧಿತ ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅಂಗಡಿ, ಗೋದಾಮುಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವ್ಯಾಪಾರ–ವಹಿವಾಟು ನಡೆಸಬಹುದು. ಮೀನುಗಾರಿಕೆ, ಕೋಳಿ ಸಾಕಣೆ, ಮಾಂಸ ಮತ್ತು ಡೇರಿ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ಆದರೆ, ಇವುಗಳನ್ನು ವಾಹನಗಳಲ್ಲಿ ಒಯ್ಯವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಮಾಹಿತಿ ನೀಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು