ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: 5 ತಿಂಗಳಲ್ಲಿ 3 ಲಕ್ಷ ಜನರಿಗೆ ಕೋವಿಡ್

5 ಸಾವಿರ ದಾಟಿದ ಮೃತರ ಸಂಖ್ಯೆ:
Last Updated 26 ಆಗಸ್ಟ್ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 8,580 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್‌ ಪೀಡಿತರ ಸಂಖ್ಯೆ 3 ಲಕ್ಷಕ್ಕೆ ಏರಿದೆ. 133 ಜನ ಸೋಂಕಿನಿಂದ ಮೃತಪಟ್ಟಿರುವುದು ಖಚಿತವಾಗಿದ್ದು ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ ಐದು ಸಾವಿರ ದಾಟಿದೆ.

ಮೊದಲ ಪ್ರಕರಣದಿಂದ ಸಾವಿರ ಪ್ರಕರಣಗಳು ವರದಿಯಾಗಲು ಎರಡು ತಿಂಗಳು ತೆಗೆದುಕೊಂಡಿದ್ದರೆ, ನಂತರದ ಒಂದೂವರೆ ತಿಂಗಳಲ್ಲಿಯೇ ಹತ್ತು ಸಾವಿರಕ್ಕೆ ತಲುಪಿ, ಐದೇ ತಿಂಗಳಲ್ಲಿ 3 ಲಕ್ಷಕ್ಕೆ ಏರಿದೆ.

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆದಂತೆ, ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯೂ ಅದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ ಎರಡೇ ದಿನದಲ್ಲಿ ಮೊದಲ ಸಾವು ಸಂಭವಿಸಿತ್ತು. ನಂತರದಲ್ಲಿ ತಿಂಗಳಿಗೆ ಸಾವಿರದಂತೆ 130 ದಿನಗಳಲ್ಲಿ ಐದು ಸಾವಿರಕ್ಕೆ ತಲುಪಿದೆ. ಕಳೆದ ಒಂದೇ ತಿಂಗಳಲ್ಲಿ 3,213 ಸೋಂಕಿತರ ಸಾವಾಗಿದೆ. ಅಂದರೆ, ನಿತ್ಯ ಸರಾಸರಿ 103 ಜನ ಸಾವಿಗೀಡಾಗಿದ್ದಾರೆ.

83 ಸಾವಿರ ಸಕ್ರಿಯ

ರಾಜ್ಯದಲ್ಲಿ ಸದ್ಯ 83,608 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳು, ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 760 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ 7,249 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಸೋಂಕಿನಿಂದ ಮುಕ್ತರಾದವರ ಒಟ್ಟಾರೆ ಸಂಖ್ಯೆ 2,11,688ಕ್ಕೆ ತಲುಪಿದೆ.

ಅತಿ ಹೆಚ್ಚು ಪರೀಕ್ಷೆ

ಆ. 26ರಂದು ಒಂದೇ ದಿನ ರಾಜ್ಯದಲ್ಲಿ 25,886 ಆ್ಯಂಟಿಜೆನ್‌ ಪರೀಕ್ಷೆ ಮತ್ತು 41,180 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುವುದರೊಂದಿಗೆ ಒಟ್ಟು 67,066 ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಆ ಮೂಲಕ ಒಂದೇ ದಿನ ಅತಿ ಹೆಚ್ಚು ಪರೀಕ್ಷೆ ಪರೀಕ್ಷೆ ನಡೆಸಿದಂತಾಗಿದೆ. ಈವರೆಗೆ ಒಟ್ಟು 25,80,621 ಜನರು ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು

ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ, 3,284 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಬುಧವಾರ 31 ಸೋಂಕಿತರು ಮೃತಪಟ್ಟಿದ್ದಾರೆ. ಮೈಸೂರು 951, ಬಳ್ಳಾರಿ 510, ದಕ್ಷಿಣ ಕನ್ನಡ 314, ಬೆಳಗಾವಿ, ದಾವಣಗೆರೆ, ಧಾರವಾಡ, ಉಡುಪಿಯಲ್ಲಿ 200ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದಾರೆ. ಉಳಿದಂತೆ 12 ಜಿಲ್ಲೆಗಳಲ್ಲಿ 50ಕ್ಕೂ ಕಡಿಮೆ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮೈಸೂರು (20) ಹಾಗೂ ದಕ್ಷಿಣ ಕನ್ನಡದಲ್ಲಿಯೂ (11) ಮೃತರ ಸಂಖ್ಯೆ ಎರಡಂಕಿ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT