ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಗೆಲುವಿನ ರೂವಾರಿಗಳಿಗೆ ‘ನಿಗಮ ಭಾಗ್ಯ’

ಜಿಲ್ಲೆಯ ನಾಲ್ಕು ಮಂದಿಗೆ ನಿಗಮಗಳ ಅಧ್ಯಕ್ಷ ಹುದ್ದೆ
Last Updated 25 ನವೆಂಬರ್ 2020, 20:41 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಜಿಲ್ಲೆಯ ನಾಲ್ವರನ್ನು ವಿವಿಧ ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಿದೆ.

ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮತ್ತು ಪಕ್ಷದ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಸ್‌.ಆರ್.ಗೌಡ ಮತ್ತು ಬಿ.ಕೆ.ಮಂಜುನಾಥ್ ಅವರಿಗೆ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಅಧಿಕಾರದ ಅದೃಷ್ಟ ಖುಲಾಯಿಸಿದೆ.

ಈ ಇಬ್ಬರೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ವರಿಷ್ಠರು ಇಬ್ಬರ ಮನವೊಲಿಸಿ ಡಾ.ಸಿ.ಎಂ.ರಾಜೇಶ್‌ಗೌಡ ಅವರಿಗೆ ಟಿಕೆಟ್ ನೀಡಿದರು. ಇಬ್ಬರಿಗೂ ನಿಗಮ, ಮಂಡಳಿಯಲ್ಲಿ ಸ್ಥಾನ ಕಲ್ಪಿಸುವುದಾಗಿ ಭರವಸೆ ಸಹ ನೀಡಿದ್ದರು. ಅದರಂತೆ ಅವಕಾಶ ನೀಡಲಾಗಿದೆ. ಇದು ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೂ ಕಾರಣವಾಗಲಿದೆ ಎನ್ನುವುದು ಪಕ್ಷದ ಮುಖಂಡರ ಅಭಿಪ್ರಾಯ.

ನಾಗೇಶ್‌ಗೆ ಕಾರ್ಮಿಕ ಕಲ್ಯಾಣ ಮಂಡಳಿ: ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರಿಗೆ ಕೆಲವು ತಿಂಗಳ ಹಿಂದೆ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಅವರು ಈ ಸ್ಥಾನವನ್ನು ಒಪ್ಪಿಕೊಂಡಿರಲಿಲ್ಲ. ಈಗ ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಗೇಶ್ ಎರಡು ಅವಧಿಗೆ ಶಾಸಕರಾಗಿದ್ದಾರೆ. ಸಂಘ ಪರಿವಾರ ಮೂಲದ ಅವರು ಜಿಲ್ಲೆಯ ಹಿರಿಯ ಬಿಜೆಪಿ ನಾಯಕರಾಗಿದ್ದಾರೆ. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಸಹ ನಿರ್ವಹಿಸಿದ್ದಾರೆ.

ನೇಪಥ್ಯಕ್ಕೆ ಸರಿದವರಿಗೆ ಹುದ್ದೆ: ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆಂಕೆರೆ ಗ್ರಾಮದ ಕೆ.ಎಸ್‌.ಕಿರಣ್ ಕುಮಾರ್ ಅವರಿಗೆ‌ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಟಿ.ಬಿ.ಜಯಚಂದ್ರ ಅವರನ್ನು ಕಿರಣ್ ಕುಮಾರ್ ಸೋಲಿಸಿ ವಿಧಾನಸಭೆ ಮೆಟ್ಟಿಲು ಹತ್ತಿದ್ದರು.

ಕ್ಷೇತ್ರ ಪುನರ್ವಿಂಗಡಣೆಯ ತರುವಾಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಆಗದೆ ನೇಪಥ್ಯಕ್ಕೆ ಸರಿದಿದ್ದರು. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಒಬ್ಬರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಗೌಡರಿಗೆ ರೇಷ್ಮೆ ನಿಗಮ: ಶಿರಾ ತಾಲ್ಲೂಕು ಮಾಯಸಂದ್ರದ ಎಸ್‌.ಆರ್‌.ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿದ್ದಾರೆ. ಶಿರಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕುಂಚಿಟಿಗ ಸಮುದಾಯದ ಮುಖಂಡರಾದ ಅವರನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ.

ಮಂಜುನಾಥ್‌ಗೆ ನಾರು ಅಭಿವೃದ್ಧಿ: ಕುರುಬ ಸಮುದಾಯದ ನಾಯಕ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿರಾ ತಾಲ್ಲೂಕು ಬೇವಿನಹಳ್ಳಿಯ ಬಿ.ಕೆ.ಮಂಜುನಾಥ್ ಅವರನ್ನು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ. ಮಂಜುನಾಥ್ 2008 ಮತ್ತು 2013ರ ಶಿರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT