ಸೋಮವಾರ, ಡಿಸೆಂಬರ್ 6, 2021
27 °C
ಭ್ರಷ್ಟಾಚಾರ ಆರೋಪ: ಅನಿಲ್‌ ಕುಮಾರ್‌ ವಿಚಾರಣೆಗೆ ಅನುಮತಿ ಕೋರಿ ಪತ್ರ

ಬಿಬಿಎಂಪಿ ಭ್ರಷ್ಟಾಚಾರ: ಅನಿಲ್‌ ಕುಮಾರ್‌ ವಿಚಾರಣೆಗೆ ಮುಂದಾದ ಎಸಿಬಿ

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹಿರಿಯ ಐಎಎಸ್ ಅಧಿಕಾರಿ ಬಿ.ಎಚ್‌.ಅನಿಲ್‌ ಕುಮಾರ್‌ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ರ ಬರೆದಿದೆ. 

ಅನಿಲ್‌ ಕುಮಾರ್ ಅವರು 2019ರ ಆಗಸ್ಟ್‌ನಿಂದ 2020ರ ಜುಲೈ 17ರ ವರೆಗೆ ಬಿಬಿಎಂಪಿ ಆಯುಕ್ತರಾಗಿದ್ದರು. ಪ್ರಸ್ತುತ ಸಾರ್ವಜನಿಕ ಉದ್ಯಮಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

‘ಬಿಬಿಎಂಪಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅದರಲ್ಲಿ ಅನಿಲ್‌ ಕುಮಾರ್ ಅವರು ಭಾಗಿಯಾಗಿದ್ದಾರೆ’ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಎಚ್‌.ವೀರೇಶ್ ಅವರು ಮೇ 2ರಂದು ಎಸಿಬಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯ ಎಸ್‌ಪಿಗಳು ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿದ್ದರು. ಈ ಪ್ರಕರಣದಲ್ಲಿ ಅನಿಲ್‌ ಕುಮಾರ್ ಅವರ ವಿಚಾರಣೆ ನಡೆಸುವ ಅಗತ್ಯವಿದ್ದು, ಅದಕ್ಕೆ ಅನುಮತಿ ನೀಡುವಂತೆ ಎಸಿಬಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ಈವರೆಗೆ ಉತ್ತರ ಬಂದಿಲ್ಲ ಎಂದು ಭ್ರಷ್ಟಾಚಾರ ನಿಗ್ರಹ ದಳದ ಉನ್ನತ ಮೂಲಗಳು ತಿಳಿಸಿವೆ. 

‘ಸಾರ್ವಜನಿಕ ನೌಕರರು ಕಾರ್ಯನಿರ್ವಹಣೆ ವೇಳೆ ಕೈಗೊಳ್ಳುವ ನಿರ್ಧಾರ ಅಥವಾ ಮಾಡುವ ಶಿಫಾರಸುಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು ನೇಮಕಾತಿ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ತನಿಖೆ ಪ್ರಾರಂಭಿಸಲು ಅವಕಾಶ ಇಲ್ಲ. ಅವರ ವಿರುದ್ಧದ ಆಪಾದನೆಗಳ ಬಗ್ಗೆ ವಿಚಾರಣೆ ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ–1988ರ ಪ್ರಕಾರ ಅನುಮತಿ ಕೊಡಬೇಕು’ ಎಂದು ಎಡಿಜಿಪಿ ಕೋರಿದ್ದಾರೆ.

ಹೆಚ್ಚುವರಿ ದಾಖಲೆ ನೀಡಿರುವೆ: ವೀರೇಶ್

‘ಪಾಲಿಕೆಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಯುಕ್ತರಾಗಿದ್ದ ಬಿ.ಎಚ್‌.ಅನಿಲ್‌ ಕುಮಾರ್‌ ವಿರುದ್ಧ ಎಸಿಬಿಗೆ ಏಳು ದೂರುಗಳನ್ನು ನೀಡಿದ್ದೆ. ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ಎಸಿಬಿ ಅಧಿಕಾರಿಗಳು ಕೇಳಿದ್ದರು. ಅವುಗಳನ್ನು ಒದಗಿಸಿದ್ದೇನೆ. ನಾಲ್ಕು ಪ್ರಕರಣಗಳಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಎಸಿಬಿ ಅಧಿಕಾರಿಗಳು ಅನುಮತಿ ಕೇಳಿದ್ದಾರೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಎಚ್‌.ವೀರೇಶ್‌ ತಿಳಿಸಿದರು.

ಅನಿಲ್‌ ಕುಮಾರ್ ವಿರುದ್ಧ ಆರೋಪಗಳೇನು?

*ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ 2016–17ನೇ ಸಾಲಿನಲ್ಲಿ ₹7,300 ಕೋಟಿ, 2017–18ರಲ್ಲಿ ₹2,191 ಕೋಟಿ ಹಾಗೂ 2018–19ರಲ್ಲಿ ₹8,343 ಕೋಟಿ ಅನುದಾನ ಒದಗಿಸಲಾಗಿದೆ. ಈ ಹಣವನ್ನು ಆಯಾ ಕ್ರಿಯಾಯೋಜನೆ ಅಡಿ ಅನುಮೋದನೆಗೊಂಡಿರುವ ಕಾಮಗಾರಿಗಳಿಗೆ ಬಿಡುಗಡೆ ಮಾಡಬೇಕು. ಆದರೆ, ಈ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಪಾಲಿಕೆಯ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಪಾವತಿ ಮಾಡಿದ್ದಾರೆ. ಆಯುಕ್ತರ ನಿಯಮಬಾಹಿರ ಕ್ರಮದಿಂದ ಗುತ್ತಿಗೆದಾರರಿಗೆ ಅನುಕೂಲವಾಗಿದೆ ಹಾಗೂ ಪಾಲಿಕೆಯ ಅರ್ಥ ವ್ಯವಸ್ಥೆ ಕುಸಿದಿದೆ.

*ಬಿಬಿಎಂಪಿ ವ್ಯಾಪ್ತಿಯ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳ ಗುಂಡಿಗಳನ್ನು ಪೈಥಾನ್‌ ಯಂತ್ರ ಬಳಸಿ ಮುಚ್ಚುವ ಗುತ್ತಿಗೆಯನ್ನು ಅಮೆರಿಕನ್‌ ರೋಡ್‌ ಟೆಕ್ನಾಲಜಿ ಆ್ಯಂಡ್‌ ಸಲ್ಯೂಷನ್‌ ಸಂಸ್ಥೆಗೆ ನೀಡಲಾಗಿದೆ. ಗುತ್ತಿಗೆ ಅವಧಿ ಎರಡು ವರ್ಷಗಳು. ಗುತ್ತಿಗೆ ಅವಧಿಯನ್ನು ಮತ್ತೆ ಒಂದು ವರ್ಷ ಮುಂದುವರಿಸಲಾಗಿದೆ. ಪ್ಯಾಕೇಜ್‌ ಎ ಕಾಮಗಾರಿಗೆ ₹2.99 ಕೋಟಿ ಮೊತ್ತಕ್ಕೆ ಕಾರ್ಯಾದೇಶ ನೀಡಿದ್ದು, ಯಾವುದೇ ಅನುಮೋದನೆ ನೀಡದೆ ₹6.38 ಕೋಟಿ ಪಾವತಿಸಲಾಗಿದೆ. ಪ್ಯಾಕೇಜ್‌ ಬಿ ಕಾಮಗಾರಿಗೆ ₹2.88 ಕೋಟಿ ಕಾರ್ಯಾದೇಶ ನೀಡಲಾಗಿದ್ದು, ಇದಕ್ಕೆ ₹6.07 ಕೋಟಿ ಪಾವತಿಸಲಾಗಿದೆ. ಕಾನೂನುಬಾಹಿರವಾಗಿ ಒಟ್ಟು ₹6.58 ಕೋಟಿ ಪಾವತಿ ಮಾಡಲಾಗಿದೆ.

***

ಎಸಿಬಿಯವರು ತನಿಖೆ ಮಾಡಲಿ. ಬಿಬಿಎಂಪಿಯಲ್ಲಿ ವಾಸ್ತವವಾಗಿ ಏನಾಗಿದೆ ಎಂದು ಎಸಿಬಿಯವರಿಗೆ ಮಾಹಿತಿಯನ್ನು ಒದಗಿಸುವೆ.

– ಬಿ.ಎಚ್‌.ಅನಿಲ್‌ ಕುಮಾರ್‌, ಐಎಎಸ್‌ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು