ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಕಡ 40 ಲಂಚ ಪ್ರಕರಣ; ತನಿಖೆಗೆ ಸದನ ಸಮಿತಿ ರಚಿಸಲಿ: ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ
Last Updated 27 ನವೆಂಬರ್ 2021, 19:18 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಬಿಬಿಎಂಪಿ ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚ ಪಡೆಯಲಾಗುತ್ತಿದೆ ಎಂಬ ಆರೋಪದ ತನಿಖೆಗೆ ವಿಧಾನಮಂಡಲದ ಜಂಟಿ ಸದನ ಸಮಿತಿ ರಚಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈ ಆರೋಪದ ಬಗ್ಗೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಏನು ವಿಚಾರಣೆ ಮಾಡಲು ಸಾಧ್ಯ?‌ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ವಿಚಾರಣೆ ನಡೆಸಬೇಕು ಎಂಬ ನಮ್ಮ ಬೇಡಿಕೆಯನ್ನು ಒಪ್ಪಲು ಸರ್ಕಾರ ಸಿದ್ಧವಿಲ್ಲ. ಹೀಗಾಗಿ, ಸದನ ಸಮಿತಿಯಿಂದ ತನಿಖೆ ಮಾಡಿಸಲಿ. ಯಾರು, ಯಾರು, ಏನುಮಾಡಿದ್ದಾರೆ ಎನ್ನುವುದು ಬಹಿರಂಗ ಆಗಲಿ’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ಸರ್ಕಾರದ ಅವಧಿಯ ಟೆಂಡರ್‌ಗಳನ್ನೂ ಸೇರಿಸಿ ವಿಚಾರಣೆ ನಡೆಸಲಾಗುವುದು’ ಎಂಬ ಮುಖ್ಯಮಂತ್ರಿ ಹೇಳಿಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಬೇಡ ಅಂದವರು ಯಾರು? ಕಳೆದ 10 ವರ್ಷಗಳದ್ದನ್ನೂ ಸೇರಿಸಿ ತನಿಖೆ ನಡೆಸಲಿ’ ಎಂದು ಹೇಳಿದರು.

‘ಸಾರ್ವಜನಿಕರ ಹಣವನ್ನು ಯಾರೇ ದುರುಪಯೋಗ ಮಾಡಿದ್ದರೂ ತಪ್ಪೇ? ಅದು ಬಿಜೆಪಿಯವರು ಇರಲಿ, ಕಾಂಗ್ರೆಸ್‌ನವರು ಇರಲಿ, ಜೆಡಿಎಸ್‌ನವರೇ ಇರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಬಿಜೆಪಿಯವರ ನೇತೃತ್ವದಲ್ಲೇ ಸದನ ಸಮಿತಿ ರಚನೆಯಾಗಲಿ. ಅವರ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ’ ಎಂದು ಸಲಹೆ ನೀಡಿದರು.

‘ಪರ್ಸಂಟೇಜ್‌ ವಿರುದ್ಧದ ಹೋರಾಟವನ್ನು ಖಂಡಿತಾ ಮುಂದುವರಿಸುತ್ತೇವೆ. ಪ್ರಧಾನಿಗೆಪತ್ರ ಬರೆದಿರುವ ಗುತ್ತಿಗೆದಾರರು ದಡ್ಡರಲ್ಲ. ವಿವಿಧ ಇಲಾಖೆಗಳ ಕೆಲಸ ಮಾಡಿಸುವ ಒಂದು ಲಕ್ಷ ಜನ ಇದ್ದಾರೆ. ಗುತ್ತಿಗೆದಾರರು ಅವರಿಗೆಆಗಿರುವ ನೋವು ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಆರೋಪದ ಬಗ್ಗೆ ಸದನ ಸಮಿತಿ ವಿಚಾರಣೆ ನಡೆಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT