ಭಾನುವಾರ, ಅಕ್ಟೋಬರ್ 24, 2021
25 °C

ಹುದ್ದೆಗೆ ಆಯ್ಕೆಯಾದರೂ 28 ಮಂದಿಗೆ ಸಿಗದ ನೇಮಕಾತಿ ಪತ್ರ: ಪರಿಶೀಲಿಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಆರ್‌ಬಿ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗಿರುವ 28 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡುವುದರ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದರು.  

ವಿಧಾನ ಪರಿಷತ್‌ನಲ್ಲಿ ಗುರುವಾರ ಸದಸ್ಯರು ಪಕ್ಷ ಭೇದ ಮರೆತು ಈ ವಿಷಯ ಪ್ರಸ್ತಾಪಿಸಿದರು. 

ಬಿಜೆಪಿಯ ಎನ್. ರವಿಕುಮಾರ್, ‘2012ರಲ್ಲಿ ಹೊರಡಿಸಿದ ಅಧಿಸೂಚನೆಯನ್ವಯ, ಐಆರ್‌ಬಿಯಲ್ಲಿ 750 ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯಿತು. ಈ ಪೈಕಿ 722 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಉಳಿದ 28 ಅಭ್ಯರ್ಥಿಗಳಿಗೆ ಮಾತ್ರ ಈವರೆಗೆ ನೇಮಕಾತಿ ಆದೇಶ ನೀಡಿಲ್ಲ. ಆದರೆ ಈ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ, ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜಾತಿ ಸಿಂಧುತ್ವ ಹಾಗೂ ಅಂಕಪಟ್ಟಿಗಳ ಸಿಂಧುತ್ವ ದಾಖಲೆಗಳೂ ಕ್ರಮಬದ್ಧವಾಗಿವೆ ಎಂದು ಇಲಾಖೆಯೇ ದೃಢೀಕರಿಸಿದೆ. ಆದರೂ ನೇಮಕಾತಿ ಪತ್ರ ನೀಡಿಲ್ಲ’ ಎಂದರು. 

ಬಿಜೆಪಿಯ ಆಯನೂರು ಮಂಜುನಾಥ್, ‘ಆಯ್ಕೆಯಾದವರಿಗೆ ಮಾತ್ರ ಸಿಂಧುತ್ವ ಪತ್ರ ನೀಡುವಂತೆ ಹೇಳಲಾಗುತ್ತದೆ. ಈ ಅಭ್ಯರ್ಥಿಗಳಿಂದಲೂ ಸಿಂಧುತ್ವ ಪತ್ರ ಪಡೆಯಲಾಗಿದೆ. ಆದರೆ, ಯಾವ ಕಾರಣವನ್ನೂ ನೀಡದೆ ಅವಕಾಶ ನಿರಾಕರಿಸಲಾಗುತ್ತಿದೆ‘ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ‘ಈ 28 ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)  ಮತ್ತು ಹೈಕೋರ್ಟ್‌ ಮೊರೆ ಹೋಗಿದ್ದರು. ಅಲ್ಲಿ ಇವರ ಅರ್ಜಿ ತಿರಸ್ಕೃತಗೊಂಡಿದೆ’ ಎಂದರು. 

ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘ಈ ವಿಷಯವನ್ನು ಕಾನೂನಾತ್ಮಕವಾಗಿ ಮಾತ್ರ ನೋಡದೆ, ಕರುಣೆಯ ಕಣ್ಣುಗಳಿಂದ ನೋಡುವ ಅಗತ್ಯವಿದೆ’ ಎಂದರು. 

ಜೆಡಿಎಸ್‌ನ ಮರಿತಿಬ್ಬೇಗೌಡ, ‘ಈ ಪ್ರಕರಣದಲ್ಲಿ ಆಯ್ಕೆ ಸಮಿತಿಯ ಲೋಪ ಎದ್ದುಕಾಣುತ್ತಿದೆ. ಆಯ್ಕೆ ಸಮಿತಿಯಲ್ಲಿದ್ದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು