ಬೆಂಗಳೂರು: ‘ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಆರಿಸಿ ಬಂದಿದ್ದಾರೆ’ ಎಂಬ ಚುನಾವಣಾ ಅಕ್ರಮ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.
ಈ ಕುರಿತಂತೆ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಕಲಬುರ್ಗಿ ಪೀಠದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕಟಿಸಿದ್ದು, ಪರಾಜಿತ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.
‘ಗೌರಿಶಂಕರ್ ವಿರುದ್ಧದ ಚುನಾವಣಾ ಅಕ್ರಮಗಳು ಪ್ರಜಾಪ್ರತಿನಿಧಿ ಕಾಯ್ದೆ–1951ರ ಕಲಂ 100 (1)(ಬಿ) ಅನುಸಾರ ಸಾಬೀತಾಗಿರುವ ಕಾರಣ ಆಯ್ಕೆಯನ್ನು ಅನೂರ್ಜಿತಗೊಳಿಸಲಾಗಿದೆ. ಕಲಂ 99 (1)ಎ(ii)ರ ಪ್ರಕಾರ ಗೌರಿಶಂಕರ್ ಏಜೆಂಟರುಗಳಾಗಿದ್ದ ಹಾಗೂ ಪ್ರಕರಣದ ಪ್ರತಿವಾದಿಗಳೂ ಆದ ಜಿ. ಫಾಲನೇತ್ರ, ಅರೇಹಳ್ಳಿ ಮಂಜುನಾಥ, ಕೃಷ್ಣೇಗೌಡ, ರೇಣುಕಮ್ಮ ಮತ್ತು ಸುನಂದಮ್ಮ
ಅವರೂ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ‘ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. ಅಂತೆಯೇ, ‘ಚುನಾಯಿತ ಅಭ್ಯರ್ಥಿಯಾಗಿ ನನ್ನನ್ನೇ ಘೋಷಣೆ ಮಾಡಬೇಕು ಎಂಬ ಅರ್ಜಿದಾರ ಸುರೇಶ್ ಗೌಡರ ಮನವಿಗೆ ಸೂಕ್ತ ಆಧಾರ ಮತ್ತು ಸಕಾರಣಗಳು ಇಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.
ತೀರ್ಪು ಹೊರಬೀಳುತ್ತಲೇ, ಗೌರಿಶಂಕರ್ ಪರ ವಕೀಲ ಆರ್. ಹೇಮಂತ ರಾಜ್, ‘ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೀರ್ಪಿಗೆ ತಡೆ ನೀಡಬೇಕು’ ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, 30 ದಿನಗಳ ಕಾಲ ತನ್ನ ಆದೇಶವನ್ನು ಅಮಾನತಿನಲ್ಲಿ ಇರಿಸಿದ್ದು, ‘ಈ ಆದೇಶವು ಗೌರಿಶಂಕರ್ ಮುಂದಿನ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಡ್ಡಿ ಉಂಟು ಮಾಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.
ಅನರ್ಹತೆ ಭೀತಿ: ‘ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅನೂರ್ಜಿತಗೊಳಿಸಿರುವ ಕಾರಣ ಅವರನ್ನು ಪ್ರಜಾಪ್ರತಿನಿಧಿ ಕಾಯ್ದೆ–1951ರ ಅನ್ವಯ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು. ಹಾಗಾಗಿ, ಈಗ ಗೌರಿಶಂಕರ್ ಮುಂದಿರುವ ಆಯ್ಕೆ ಎಂದರೆ 30 ದಿನಗಳ ಒಳಗಾಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ಹೈಕೋರ್ಟ್ ತೀರ್ಪಿಗೆ ತಡೆ ಪಡೆದರೆ ಮಾತ್ರ ಗೌರಿಶಂಕರ್ ಪ್ರಸಕ್ತ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ’ ಎಂಬುದು ಕಾನೂನು ತಜ್ಞರ ಅಭಿಮತ.
ಏನಿದು ಪ್ರಕರಣ?: ರಾಜ್ಯದ 15ನೇ ವಿಧಾನಸಭೆಗೆ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೌರಿಶಂಕರ್ ಜಾತ್ಯತೀತ ಜನತಾ ದಳದಿಂದ (ಜೆಡಿಎಸ್) ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ 2018ರ ಮೇ 15ರಂದು ಘೋಷಿಸಿದ್ದರು.
ಗೌರಿಶಂಕರ್ 82,740 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿಯಾಗಿ ಸಮೀಪದ ಪ್ರತಿಸ್ಪರ್ಧಿ ಬಿ.ಸುರೇಶ್ ಗೌಡ 77,110 ಮತಗಳನ್ನು ಪಡೆದು 5,640 ಮತಗಳ ಅಂತರದಿಂದ ಸೋತಿದ್ದರು. ‘ವಿಜೇತ ಅಭ್ಯರ್ಥಿ ಚುನಾವಣೆಯಲ್ಲಿ ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿ ಸುರೇಶ್ ಗೌಡ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಸುರೇಶ್ ಗೌಡರ ಪರ ವಾದ ಮಂಡಿಸಿದ್ದ ಹಿರಿಯ ವಕೀಲೆ ನಳಿನಾ ಮಾಯೇಗೌಡ, ‘ಗೌರಿಶಂಕರ್ ತಮ್ಮ ಕುಟುಂಬದ ಸದಸ್ಯರ ನಿಯಂತ್ರಣದಲ್ಲಿರುವ, ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ (ಕೆಎಂಎಸ್‌ಎಸ್) ಮೂಲಕ ದಾಸರಹಳ್ಳಿಯಲ್ಲಿನ ಶನಿದೇವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹ 5 ಲಕ್ಷ ನೀಡಿರುವುದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೆಎಂಎಸ್‌ಎಸ್ ನಡೆಸುತ್ತಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ 1 ಸಾವಿರ ಸೀಟುಗಳಿಗೆ ಉಚಿತ ಪ್ರವೇಶ ಒದಗಿಸಲಾಗುವುದು ಎಂಬ ಆಮಿಷ, ಮತದಾರರಿಗೆ ವೈದ್ಯಕೀಯ ನೆರವಿನ ವಿಮಾ ಬಾಂಡ್‌ಗಳನ್ನು ಹಂಚಿರುವುದು, ಚುನಾವಣಾ ಪ್ರಚಾರದ ವೇಳೆ ಹಣ ಹಂಚಿರುವುದೂ ಸೇರಿದಂತೆ ಗೌರಿಶಂಕರ್ ವ್ಯಾಪಕ ಅಕ್ರಮಗಳನ್ನು ಎಸಗಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದರು.
ಬೇಲೂರು ಶಾಸಕ ಲಿಂಗೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ
ಬೆಂಗಳೂರು: ಸುಮಾರು ₹775 ಕೋಟಿಗೂ ಹೆಚ್ಚಿನ ಮೌಲ್ಯದ 2,750 ಎಕರೆ ಸರ್ಕಾರಿ ಜಮೀನನ್ನು ಅನರ್ಹರಿಗೆ ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಈ ಕುರಿತಂತೆ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್ ಗುರುವಾರ ಆದೇಶಿಸಿದ್ದು, ‘ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 156 (3)ರ ಅನುಸಾರ ತನಿಖೆ ನಡೆಸಿ 2023ರ ಜುಲೈ 7ಕ್ಕೆ ವರದಿ ಸಲ್ಲಿಸಿ’ ಎಂದು ಬೇಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದಾರೆ.
ಪ್ರಕರಣವೇನು?: ಬೇಲೂರು ತಾಲ್ಲೂಕಿನ ಅಂದಾಜು ಮಾರುಕಟ್ಟೆ ದರ ₹775 ಕೋಟಿಗೂ ಹೆಚ್ಚಿನ ಮೌಲ್ಯದ 2,750 ಎಕರೆ 86 ಗುಂಟೆಯಷ್ಟು ಸರ್ಕಾರಿ ಜಮೀನನ್ನು ಬಲಾಢ್ಯ, ಅನರ್ಹ, ಅಪ್ರಾಪ್ತ ಮತ್ತು ಬೆಂಗಳೂರಿನ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ಒಟ್ಟು 15 ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆರೋಪಿಸಿ ಕೋಲಾರ ಗಾಂಧಿನಗರದ ನಿವಾಸಿ ಕೆ.ಸಿ.ರಾಜಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ವಿವರಗಳಂತೆ, ‘ಬೇಲೂರು ತಾಲ್ಲೂಕು ಕಸಬಾ ಹೋಬಳಿಯ ಪುರಸಭೆ ವ್ಯಾಪ್ತಿಯ 3 ಕಿ.ಮೀ ಒಳಗಿನ ಮಾವಿನಕೆರೆ, ಬಂಟೇನಹಳ್ಳಿ, ಡಣಾಯ್ಕನಹಳ್ಳಿ, ಮುದಿಗೆರೆ ಹಾಗೂ ರಾಯಪುರದ ಸರ್ವೇ ನಂಬರ್‌ಗಳ ಪೈಕಿ 18 ಜನರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. 2016ರ ಅಕ್ಟೋಬರ್ 28ರಿಂದ 2022ರ ಡಿಸೆಂಬರ್ 11ರ ಮಧ್ಯದ ಅವಧಿಯಲ್ಲಿ ನಡೆದ ಭೂ ಸಕ್ರಮೀಕರಣದ 26 ಸಭೆಗಳಲ್ಲಿ ಒಟ್ಟು 1,430 ಅರ್ಜಿದಾರರ ಪೈಕಿ 2,750 ಎಕರೆ 86 ಗುಂಟೆ ಜಮೀನಿನ ಅಕ್ರಮ ಮಂಜೂರಾತಿ ಪ್ರಕ್ರಿಯೆ ಜರುಗಿದೆ’ ಎಂದು ದೂರುದಾರರು ಆರೋಪಿಸಿದ್ದಾರೆ.
‘ಹೇಮಾವತಿ, ಯಗಚಿ, ಜಲಾಶಯ ಯೋಜನೆಯಡಿ ಮುಳುಗಡೆ ಸಂತ್ರಸ್ತ ರೈತರು, ಯೋಧರಿಗೆ ಕಾಯ್ದಿರಿಸಿದ್ದ ಈ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನು ಬೆಂಗಳೂರು ಹಾಗೂ ಬೇರೆ ಬೇರೆ ತಾಲ್ಲೂಕಿನ, ಹೊರಗಿನ ನಿವಾಸಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಮಂಜೂರಾದ ಅರ್ಜಿದಾರರ ಪೈಕಿ 1,260 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗಿದ್ದು, 1,260 ಅರ್ಜಿದಾರರಿಗೆ ಖಾತೆ ಮಾಡಲಾಗಿದೆ. ಇವುಗಳ ಪೈಕಿ ಬಹುತೇಕ ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಭೂ ಮಂಜೂರಾತಿ ಸಮಿತಿ ಅಧ್ಯಕ್ಷ, ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸುಳ್ಳು ದಸ್ತಾವೇಜುಗಳನ್ನು ಸೃಷ್ಟಿಸಿರುವ ಈ ಸರ್ಕಾರಿ ನೌಕರರು ನಂಬಿಕೆ ದ್ರೋಹ ಎಸಗಿರುತ್ತಾರೆ. ಆದ್ದರಿಂದ, ಇವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಕಲಂ 468, 465, 464, 420, 471, 120 ಬಿ ಹಾಗೂ 409ರ ಅನ್ವಯ ಕಾನೂನು ಕ್ರಮ ಜರುಗಿಸಬೇಕು’ ಎಂದು ಫಿರ್ಯಾದುದಾರರು ಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.