ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಇದ್ದರೂ ಬೇಡಿಕೆ ಸಲ್ಲಿಸದ ಸರ್ಕಾರ

4,240 ಹಾಸಿಗೆ ಸಾಮರ್ಥ್ಯದ ರೈಲ್ವೆ ಬೋಗಿ ಐಸೊಲೇಷನ್‌ ವಾರ್ಡ್‌ಗಳು ಸಿದ್ಧ
Last Updated 25 ಏಪ್ರಿಲ್ 2021, 19:13 IST
ಅಕ್ಷರ ಗಾತ್ರ

ಬೆಂಗಳೂರು: ನೈರುತ್ಯ ರೈಲ್ವೆಯು 4,240 ಹಾಸಿಗೆ ಸಾಮರ್ಥ್ಯದ ಐಸೊಲೇಷನ್‌ ರೈಲು ಬೋಗಿಗಳನ್ನು ಸಿದ್ಧ ಮಾಡಿಕೊಂಡಿದೆ.

ಈ ಪೈಕಿ ನಗರದ ಕೆಎಸ್‌ಆರ್‌ ಹಾಗೂ ಯಶವಂತಪುರ, ಮೈಸೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ಆಕ್ಸಿಜನ್‌ ಸಹಿತ ಹಾಸಿಗೆಗಳನ್ನು ಪೂರೈಸಲೂ ಸಜ್ಜಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಬೇಡಿಕೆ ಹೋಗಿರದ ಕಾರಣ ಈ ಸೌಲಭ್ಯವು ಬಳಕೆಯಾಗದೇ ಉಳಿದಿದೆ.

ಕೋವಿಡ್‌ ಐಸೊಲೇಷನ್‌ ವಾರ್ಡ್‌ ಮಾದರಿಯಲ್ಲಿ ಈ ಬೋಗಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನೈರುತ್ಯ ರೈಲ್ವೆಯ ಮೂರು ವಿಭಾಗಗಳಿಗೆ ಇವುಗಳನ್ನು ಹಂಚಲಾಗಿದ್ದು, ಸೇವೆಗೆ ಸಿದ್ಧವಾಗಿವೆ.

‘ಸೋಂಕಿನ ಸೌಮ್ಯ ಸ್ವಭಾವದ ಲಕ್ಷಣ ಹೊಂದಿರುವ, ಗಂಭೀರ ಸ್ಥಿತಿಯಲ್ಲಿಲ್ಲದ ರೋಗಿಗಳಿಗೆ ಈ ಹಾಸಿಗೆಗಳನ್ನು ಮೀಸಲಿಡಲಾಗುತ್ತಿದೆ. ನಾಲ್ಕು ನಿಲ್ದಾಣಗಳಲ್ಲಿ ಮಾತ್ರ ವೈದ್ಯಕೀಯ ಆಮ್ಲಜನಕ ವ್ಯವಸ್ಥೆ ಸಹಿತ ಹಾಸಿಗೆ ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆ ಸಚಿವಾಲಯ ಮಾರ್ಗಸೂಚಿಯಲ್ಲಿ ತಿಳಿಸಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ನಾಲ್ಕು ನಿಲ್ದಾಣಗಳಲ್ಲಿ ರೋಗಿಗಳಿಗೆ ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್‌ ಪೂರೈಸಲಾಗುತ್ತದೆ. ನಂತರದಲ್ಲಿ ಅವುಗಳನ್ನು ಪುನರ್‌ತುಂಬಿಸುವ (ರಿಫಿಲ್ಲಿಂಗ್‌) ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಅಥವಾ ಸಂಬಂಧಿಸಿದ ಜಿಲ್ಲಾಡಳಿತವೇ ಮಾಡಿಕೊಳ್ಳಬೇಕು’ ಎಂದರು.

‘ಹರಿಹರ, ಶಿವಮೊಗ್ಗ, ಹೊಸಪೇಟೆ, ಹಾಸನ, ಅರಸೀಕೆರೆ, ಬಾಗಲಕೋಟೆ, ತಾಳಗುಪ್ಪ, ವಿಜಯಪುರ, ಬೆಳಗಾವಿ ನಿಲ್ದಾಣಗಳಲ್ಲಿ ಐಸೊಲೇಷನ್‌ ಬೋಗಿಗಳನ್ನು ಮಾತ್ರ ಒದಗಿಸಲಾಗುತ್ತದೆ. ಆಮ್ಲಜನಕ ವ್ಯವಸ್ಥೆ ಬೇಕಾದರೆ ಆಯಾ ಜಿಲ್ಲಾಡಳಿತವೇ ಮಾಡಿಕೊಳ್ಳಬೇಕು’ ಎಂದೂ ಅವರು ಹೇಳಿದರು.

‘ಕಳೆದ ವರ್ಷ 320 ಬೋಗಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿತ್ತು. ರಾಜ್ಯಸರ್ಕಾರದಿಂದ ಯಾವುದೇ ಬೇಡಿಕೆ ಬಂದಿರಲಿಲ್ಲ. ಈಗ 250ಕ್ಕೂ ಹೆಚ್ಚು ಬೋಗಿ ಸಿದ್ಧ ಇವೆ. ಅಗತ್ಯಬಿದ್ದರೆ ಮತ್ತಷ್ಟು ಬೋಗಿಗಳನ್ನು ಕೋವಿಡ್‌ಗಾಗಿ ಪರಿವರ್ತಿಸಲಾಗುವುದು’ ಎಂದು ಅವರು ತಿಳಿಸಿದರು.

ಯಾವ ಸೌಲಭ್ಯಗಳಿವೆ?
ಒಂದು ಬೋಗಿಯಲ್ಲಿ 16 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಆಕ್ಸಿಜನ್‌ ಸಿಲಿಂಡರ್‌ ಅಳವಡಿಸಲು ಜಾಗವಿದೆ. ಥರ್ಮಲ್‌ ಸ್ಕ್ಯಾನರ್, ಜೈವಿಕ ಶೌಚಾಲಯ, ಕಸದ ಬುಟ್ಟಿ ಇಡಲಾಗಿದೆ. ವೈದ್ಯರು ಮತ್ತು ಶುಶ್ರೂಷಕರು ಪಿಪಿಇ ಕಿಟ್‌ ಬದಲಿಸಿಕೊಳ್ಳಲು ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗಿದೆ. ಎಲ್ಲ ಬೋಗಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

‘ಶೀಘ್ರ ಬೇಡಿಕೆ ಸಲ್ಲಿಕೆ’
‘ಸಾಮಾನ್ಯ ಹಾಸಿಗೆಗಳ ಅಗತ್ಯ ಸದ್ಯಕ್ಕಿಲ್ಲ. ಹೀಗಾಗಿ, ಯಾವುದೇ ಬೇಡಿಕೆ ಸಲ್ಲಿಸಿರಲಿಲ್ಲ. ನಮಗೆ ತುರ್ತಾಗಿ ಬೇಕಾಗಿರುವುದು ವೈದ್ಯಕೀಯ ಆಮ್ಲಜನಕ ಸಹಿತ ಹಾಸಿಗೆಗಳು. ನಾಲ್ಕು ನಿಲ್ದಾಣಗಳಲ್ಲಿ ಇಂತಹ ಹಾಸಿಗೆಗಳನ್ನು ಒದಗಿಸಿದರೂ ಸಾಕಷ್ಟು ಸಹಾಯವಾಗುತ್ತದೆ. ಈ ಬಗ್ಗೆ ಮಾಹಿತಿ ಇರಲಿಲ್ಲ. ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಬೇಡಿಕೆ ಸಲ್ಲಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶ
265:
ಮೂರು ವಿಭಾಗಗಳಲ್ಲಿನ ಕೋವಿಡ್‌ ವಾರ್ಡ್‌ ಬೋಗಿಗಳು
97:ಹುಬ್ಬಳ್ಳಿ
95:ಮೈಸೂರು
73:ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT