ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾದರೂ ಕೊರೊನಾ; ಏರಲಿದೆ ಮರಣ ಪ್ರಮಾಣ

ಮುಂದಿನ ಎರಡು ವಾರದಲ್ಲಿ ಏರಿಕೆ ಸಾಧ್ಯತೆ: ವೈದ್ಯಕೀಯ ತಜ್ಞರ ಕಳವಳ
Last Updated 26 ಮೇ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ಕೊರೊನಾ ಸೋಂಕಿತರಲ್ಲಿ ಸದ್ಯ ಮೂರು ಸಾವಿರಕ್ಕೂ ಅಧಿಕ ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ಮಂದಿ ವೈದ್ಯಕೀಯ ಆಮ್ಲಜನಕದ ಸಂಪರ್ಕದಲ್ಲಿದ್ದಾರೆ. ಇದರಿಂದಾಗಿ ಇನ್ನೂ ಎರಡು ವಾರ ಮರಣ ಪ್ರಮಾಣ ದರ ಏರುಗತಿಯಲ್ಲಿಯೇ ಇರಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷಾಂತ್ಯಕ್ಕೆ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್, ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು–ನೋವಿಗೆ ಕಾರಣವಾಗಿದೆ. 2020ರ ಮಾ.8ರಂದು ಕಾಣಿಸಿಕೊಂಡಿದ್ದ ಸೋಂಕು, ಜೂನ್‌ ಬಳಿಕ ವೇಗ ಪಡೆದುಕೊಂಡಿತ್ತು. ಅಕ್ಟೋಬರ್ ಬಳಿಕ ಸೋಂಕು ದೃಢ ಪ್ರಮಾಣ ದರ ಹಾಗೂ ಮರಣ ಪ್ರಮಾಣ ದರ ಇಳಿಮುಖ ಕಂಡಿತ್ತು. ಡಿಸೆಂಬರ್ ಅಂತ್ಯಕ್ಕೆ ಸೋಂಕು ದೃಢ ಪ್ರಮಾಣ ಶೇ 0.82 ಹಾಗೂ ಮರಣ ಪ್ರಮಾಣ ಶೇ 0.94ರಷ್ಟಿತ್ತು. ಆ ವೇಳೆಗೆ 12,090 ಮಂದಿ ಮೃತಪಟ್ಟಿದ್ದರು. ಒಟ್ಟು ಸೋಂಕಿತರ ಸಂಖ್ಯೆ 9.19 ಲಕ್ಷ ದಷ್ಟಿತ್ತು.

ಮೊದಲ ಅಲೆಯಲ್ಲಿ 60 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ, ಅಸ್ವಸ್ಥರಾಗಿದ್ದರು. ಎರಡನೇ ಅಲೆಯಲ್ಲಿ ಮಧ್ಯಮ ವಯಸ್ಕರು ಅಧಿಕ ಸಂಖ್ಯೆಯಲ್ಲಿದ್ದಾರೆ.ಈಗ ಮೃತಪಡುತ್ತಿರುವವರಲ್ಲಿ ಅರ್ಧದಷ್ಟು ಮಂದಿ 50 ವರ್ಷದೊಳಗಿನವರಾಗಿದ್ದಾರೆ. ತಡವಾಗಿ ಆಸ್ಪತ್ರೆ ಸೇರುವಿಕೆ, ಹಾಸಿಗೆ ಸಿಗದೆಯೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ, ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯ ಸೇರಿದಂತೆ ವಿವಿಧ ಕಾರಣಗಳಿಂದ ಏಪ್ರಿಲ್ ಬಳಿಕ ಕೋವಿಡ್‌ಗೆ ಮರಣ ಹೊಂದರುವವರ ಸಂಖ್ಯೆ ಗಣನೀಯ ಏರುಗತಿ ಪಡೆದಿದೆ.

ಈ ವರ್ಷ ಐದು ತಿಂಗಳೊಳಗೆ 14,309 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕರು ತೀವ್ರ ಉಸಿರಾಟದ ಸಮಸ್ಯೆ ಎದುರಿಸಿ, ಆಮ್ಲಜನಕ ಪ್ರಮಾಣ ಕುಸಿತು ಕಂಡು ಮೃತಪಟ್ಟವರಾಗಿದ್ದಾರೆ. ಮೇ ತಿಂಗಳಲ್ಲಿಯೇ (ಮೇ 25ರವರೆಗೆ) 10,876 ಮಂದಿ ಮರಣ ಹೊಂದಿದ್ದಾರೆ. ಮರಣ ಪ್ರಮಾಣ ದರವು ಶೇ 3ರ ಗಡಿಗೆ ಸಮೀಪಿಸಿದೆ.

ಚಿಕಿತ್ಸೆ ವಿಳಂಬದ್ದೇ ಸಮಸ್ಯೆ: ‘ಎರಡು ಮೂರು ವಾರಗಳ ಹಿಂದಿನ ಪ್ರಕರಣಗಳಲ್ಲಿ ಗಂಭೀರವಾಗಿ ಅಸ್ವಸ್ಥರಾದವರು ಐಸಿಯು ದಾಖಲಾತಿ ಪಡೆದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರು ಚಿಕಿತ್ಸೆಗೆ ಸ್ಪಂದಿಸದೆಯೇ ಮೃತ‍ಪಡುತ್ತಿದ್ದಾರೆ. ಅದೇ ರೀತಿ, ಮನೆ ಆರೈಕೆಗೆ ಒಳಗಾದವರು ಕೂಡ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 80 ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾದಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಕೂಡ ಮರಣ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ’ ಎಂಬುದು ವೈದ್ಯಕೀಯ ತಜ್ಞರ ಅಭಿಮತ.

‘ಸೋಂಕು ದೃಢ ಪ್ರಮಾಣ ಕಡಿಮೆಯಾದರೂ ಇನ್ನೂ 8ರಿಂದ 10 ದಿನಗಳು ಮರಣ ಪ್ರಮಾಣದರ ಅಧಿಕ ಇರಲಿದೆ. ಮೂರು ವಾರದ ಹಿಂದೆ ಸೋಂಕಿತರಾಗಿ, ಐಸಿಯುನಲ್ಲಿ ಇರುವವರಲ್ಲಿ ಕೆಲವರು ಮೃತಪಡುತ್ತಿದ್ದಾರೆ. ಕೋವಿಡ್‌ನಂತಹ ಕಾಯಿಲೆಗಳಲ್ಲಿ ಸೋಂಕು ದೃಢ ಪ್ರಮಾಣವುಪ್ರಾರಂಭದಲ್ಲಿ ಜಾಸ್ತಿ ಇರಲಿದ್ದು, ಮರಣ ಪ್ರಮಾಣ ದರ ಕಡಿಮೆ ಇರಲಿದೆ. ಬಳಿಕ ಸೋಂಕು ದೃಢ ಪ್ರಮಾಣ ಇಳಿಕೆಯಾಗಿ, ಮರಣ ಪ್ರಮಾಣ ದರ ಹೆಚ್ಚಳವಾಗುತ್ತದೆ. ಬಳಿಕ ಎರಡೂ ಕಡಿಮೆ ಆಗಲಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

7 ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿಗಿಂತ ಅಧಿಕ
ರಾಜ್ಯದಲ್ಲಿ ಒಂದು ವಾರದ ಅವಧಿಯಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳಿಗೆ ಹೋಲಿಸಿದಲ್ಲಿ ಮರಣ ಪ್ರಮಾಣ ದರ ಶೇ 1.67ರಷ್ಟಿದೆ. ಈ ಪ್ರಮಾಣವು ಬೆಂಗಳೂರು ಗ್ರಾಮಾಂತರ, ಬೀದರ್ ಸೇರಿದಂತೆ 7 ಜಿಲ್ಲೆಗಳಲ್ಲಿ ಅಧಿಕವಿದೆ. ಕೆಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಗೂ ‘ರೆಮ್‌ಡಿಸಿವಿರ್’ ಔಷಧದ ಕೊರತೆ ಮುಂದುವರೆದಿದೆ. ಐಸಿಯು ಹಾಸಿಗೆಗಳ ಸಮಸ್ಯೆ ಕೂಡ ಗಂಭೀರ ಸ್ವರೂಪ ಪಡೆದುಕೊಂಡಿದೆ.

‘ಏಕಾಏಕಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಪರಿಣಾಮ ಸೋಂಕಿತರಿಗೆ ಹಾಸಿಗೆ ಒದಗಿಸುವುದು ಸಮಸ್ಯೆಯಾಯಿತು. ಕೆಲವರಿಗೆ ಐಸಿಯು ದಾಖಲಾತಿ ವಿಳಂಬವಾಯಿತು. ಹಂತ ಹಂತವಾಗಿ ಕಾಯಿಲೆ ಜಾಸ್ತಿಯಾದಲ್ಲಿ ಎಲ್ಲರಿಗೂ ಹಾಸಿಗೆ ಒದಗಿಸಲು ಸಾಧ್ಯವಾಗುತ್ತದೆ. ಒಂದೇ ಬಾರಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾದಾಗ ವೈದ್ಯಕೀಯ ವ್ಯವಸ್ಥೆಗೆ ಉಸಿರು ಕಟ್ಟಲಿದೆ’ ಎಂದು ಡಾ.ಸಿ.ಎನ್. ಮಂಜುನಾಥ್ ವಿವರಿಸಿದರು.

***

ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಸೋಂಕು ದೃಢ ಪ್ರಮಾಣ ಹಾಗೂ ಮರಣ ಪ್ರಮಾಣ ದರ ಕಡಿಮೆ ಆಗಲಿದೆ. ಆದರೆ, ಈ ವರ್ಷ ಪೂರ್ತಿ ಮುನ್ನೆಚ್ಚರಿಕೆ ವಹಿಸಬೇಕು.
-ಡಾ.ಸಿ.ಎನ್. ಮಂಜುನಾಥ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

***

ಕೆಲ ದಿನಗಳ ಹಿಂದೆ ಸೋಂಕಿತರಾಗಿ, ಐಸಿಯು ದಾಖಲಾದವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ವಾರದ ಬಳಿಕ ಮರಣ ಪ್ರಮಾಣ ದರ ಕೂಡ ಇಳಿಕೆಯಾಗಲಿದೆ.
-ಡಾ.ಸಿ. ನಾಗರಾಜ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT