ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕಾಯ ಪತ್ತೆಗೆ ‘ಅಂಗೈ ಪ್ರಯೋಗಾಲಯ’!

ಐಐಎಸ್‌ಸಿ ನ್ಯಾನೊ ಎಂಜಿನಿಯರಿಂಗ್ ವಿಭಾಗದಿಂದ ಅಭಿವೃದ್ಧಿ
Last Updated 23 ಮೇ 2021, 20:53 IST
ಅಕ್ಷರ ಗಾತ್ರ

ಬೆಂಗಳೂರು: ಮಾನವ ದೇಹದಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಯುದ್ಧ ಮಾಡಲು ‘ಪ್ರತಿಕಾಯ’ (ಆಂಟಿ ಬಾಡೀಸ್‌) ಗಳೆಂಬ ‘ಸೈನಿಕರು’ ಇದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ‘ಅಂಗೈ ಪ್ರಯೋಗಾಲಯ’ ಸಿದ್ಧವಾಗಿದೆ.

ಇಂತಹದ್ದೊಂದು ಸಾಧನೆ ಮಾಡಿರುವುದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನ್ಯಾನೊ ಸೈನ್ಸ್‌ ಆ್ಯಂಡ್ ಎಂಜಿನಿಯರಿಂಗ್‌ ವಿಭಾಗ.

ಕೋವಿಡ್‌ನಿಂದ ಬಾಧಿತರಾಗಿ ಗುಣಮುಖರಾದವರು ಮತ್ತು ಕೋವಿಡ್‌ ಲಕ್ಷಣಗಳು ಇಲ್ಲದ ಸೋಂಕಿತರಲ್ಲಿ ಪ್ರತಿಕಾಯಗಳು ಸೃಷ್ಟಿ ಆಗಿವೆಯೇ ಎಂಬುದನ್ನು ಅತ್ಯಂತ ತ್ವರಿತಗತಿಯಲ್ಲಿ ಮತ್ತು ನಿಖರವಾಗಿ ಮೊಬೈಲ್‌ ಸೆಟ್‌ ಗಾತ್ರದ ಅಂಗೈ ಪ್ರಯೋಗಾಲಯ (ಲ್ಯಾಬ್‌ ಆನ್‌ ಪಾಮ್‌) ಪರೀಕ್ಷಾ ವರದಿ ನೀಡಬಲ್ಲದು. ಅಲ್ಲದೆ, ಯಾವುದೇ ವ್ಯಕ್ತಿಯೂ ಪ್ರತಿಕಾಯಗಳ ಪರೀಕ್ಷೆ ಮಾಡಿಸಿಕೊಳ್ಳಬಹುದು.

‘ಇದಕ್ಕೆ ಒಂದು ಹನಿ ರಕ್ತ ಇದ್ದರೆ ಸಾಕು. ಪ್ರತಿಕಾಯಗಳನ್ನು ಭಾಗಶಃ ಪ್ರಮಾಣ ವಿಶ್ಲೇಷಣೆಯಿಂದ (ಸೆಮಿ ಕ್ವಾಂಟಿಟಿಟೀವ್) ಪ್ರತಿಕಾಯಗಳ (ಐಜಿಎಂ ಮತ್ತು ಐಜಿಜಿ) ಸಾಂದ್ರತೆಯನ್ನು ನಿಖರತೆ ತಿಳಿದುಕೊಳ್ಳಲು ಸಾಧ್ಯ. ಇದರಿಂದ ವ್ಯಕ್ತಿಗೆ ಮತ್ತೊಮ್ಮೆ ಕೊರೊನಾ ವೈರಾಣು ದಾಳಿ ಮಾಡಿದರೆ, ಅದನ್ನು ತಡೆಗಟ್ಟಲು ‘ಸೈನಿಕರು’ (ಪ್ರತಿಕಾಯಗಳು) ಸಜ್ಜಾಗಿದ್ದಾರೆಯೇ ಇಲ್ಲವೇ ಎಂಬುದರ ನಿರ್ಧಾರಕ್ಕೆ ಬರಬಹುದು’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ನ್ಯಾನೊ ಸೈನ್ಸ್‌ ಆ್ಯಂಡ್ ಎಂಜಿನಿಯರಿಂಗ್‌ ಕೇಂದ್ರದ ಪ್ರಾಧ್ಯಾಪಕ ಮತ್ತು ಅಂತರ್‌ಶಿಸ್ತು ವಿಜ್ಞಾನಗಳ ವಿಭಾಗದ ಡೀನ್‌ ಪ್ರೊ.ನವಕಾಂತ್ ಭಟ್‌.

‘ದೇಹದಲ್ಲಿ ಪ್ರತಿಕಾಯಗಳು ಬೆಳೆದಿವೆಯೇ ಎಂಬುದನ್ನು ಪತ್ತೆ ಮಾಡಿಸಲು ಈಗ ಅತಿ ದುಬಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರತಿ ಪರೀಕ್ಷೆಗೆ ₹700 ರಿಂದ ₹1,000 ದಷ್ಟು ಖರ್ಚಾಗುತ್ತದೆ. ಇದಕ್ಕೆ ಬಳಸುವ ಪರೀಕ್ಷಾ ಯಂತ್ರಗಳ ಬೆಲೆಯೂ ಕೋಟಿಗಟ್ಟಲೆ ಇದೆ. ಅಂತಹ ದೊಡ್ಡ ಯಂತ್ರದ ಮಾದರಿ, ಸಾಮರ್ಥ್ಯವನ್ನು ನಾವು ಅಂಗೈ ಅಗಲದಷ್ಟು ಕುಗ್ಗಿಸಿದ್ದೇವೆ. ಅಲ್ಲಿ ಪಡೆಯಬಹುದಾದ ಪರೀಕ್ಷಾ ಫಲಿತಾಂಶವನ್ನು ಐದು ನಿಮಿಷಗಳಲ್ಲಿಯೇ ಪಡೆಯಬಹುದು’ ಎಂದು ಅವರು ವಿವರಿಸಿದರು.

‘ಇದರ ಬಳಕೆ ಅತ್ಯಂತ ಸುಲಭ. ಹಳ್ಳಿ ಹಳ್ಳಿಗೂ ಒಯ್ದು ಜನರಲ್ಲಿ ಪ್ರತಿಕಾಯ ಪರೀಕ್ಷೆ ನಡೆಸಬಹುದು. ಟೆಸ್ಟಿಂಗ್‌ ಸ್ಟ್ರಿಪ್‌ ಮೂಲಕ ವ್ಯಕ್ತಿಯಿಂದ ರಕ್ತ ಪಡೆದು ಸಾಧನದ ಒಳಗೆ ತೂರಿಸಿದರೆ ಸಾಕು. ಫಲಿತಾಂಶ ಸಿದ್ಧ. ಈ ಸಾಧನಕ್ಕೆ ಅಮೆರಿಕದಲ್ಲಿ ಪೇಟೆಂಟ್‌ ಕೂಡ ಪಡೆಯಲಾಗಿದೆ’ ಎಂದು ನವಕಾಂತ್‌ ಭಟ್‌ ಹೇಳಿದರು.

‘ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’ (ಸಿಡಿಎಸ್‌ಸಿಒ), ಫರೀದಾಬಾದ್‌ನ ‘ಟ್ರಾನ್ಸ್‌ಲೇಷನ್‌ ಹೆಲ್ತ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಇನ್ಸ್‌ಟಿಟ್ಯೂಟ್‌’ ಈ ಸಾಧನವನ್ನು ಮೌಲ್ಯಮಾಪನಕ್ಕೆ ಒಳಪಡಿಸಿದ ಬಳಿಕ ಇದರ ತಯಾರಿಕೆಗೆ ಐಸಿಎಂಆರ್‌ ಪರವಾನಗಿ ನೀಡಿದೆ. ಐಐಎಸ್‌ಸಿಯ ‘ಪಥ್‌ಶೋಧ್ ಹೆಲ್ತ್‌ ಕೇರ್‌’ ನವೋದ್ಯಮದ ಮೂಲಕ ಇವುಗಳ ಉತ್ಪಾದನೆ ಆರಂಭಿಸಲಾಗುವುದು ಎಂದು ತಿಳಿಸಿದರು.

2ನೇ ಹಂತದಲ್ಲಿ ಕೊರೊನಾ ವೈರಾಣು ಪತ್ತೆ
ಇದೇ ಸಾಧನದ ಮೂಲಕ ಪ್ರತಿಕಾಯಗಳ ಜತೆಗೆ ಕೊರೊನಾ ವೈರಾಣುವನ್ನು ಪತ್ತೆ ಮಾಡುವ ಆಯ್ಕೆಯನ್ನು ಅಳವಡಿಸಲಾಗುವುದು. ಇದಕ್ಕೆ ಇನ್ನು ಸ್ವಲ್ಪ ಸಮಯ ಬೇಕು. ಕೊರೊನಾ ವೈರಾಣು ಅಲ್ಲದೇ ವಿವಿಧ ಬಗೆಯ ವೈರಾಣುಗಳನ್ನು ಪತ್ತೆ ಮಾಡುವ ಸಮಗ್ರ ವ್ಯವಸ್ಥೆಯನ್ನು ಅಂಗೈ ಪ್ರಯೋಗಾಲಯಕ್ಕೆ ಭವಿಷ್ಯದಲ್ಲಿ ಸೇರಿಸಲಾಗುವುದು.

ಕಳೆದ ವರ್ಷ ಅಂಗೈ ಪ್ರಯೋಗಾಲಯ ಯೋಜನೆ ಆರಂಭಿಸಿದ್ದೆವು. ಕೊರೊನಾ ಬಂದ ಕಾರಣ, ಪ್ರತಿಕಾಯ ಪತ್ತೆ ಮಾಡುವ ಪರೀಕ್ಷೆಯ ಕಡೆಗೆಗಮನ ಹರಿಸಿದೆವು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಸಾಧನದ ಅಭಿವೃದ್ಧಿಗೆ ಹಣಕಾಸು ನೆರವು ನೀಡಿದೆ ಎಂದು ನವಕಾಂತ್ ಭಟ್‌ ಹೇಳಿದರು.

***

ಇದೊಂದು ಸರಳ, ಕಡಿಮೆ ವೆಚ್ಚದ ಕ್ರಾಂತಿಕಾರಿ ಸಾಧನ. ಸರ್ಕಾರ, ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು ಇದರ ಪ್ರಯೋಜನ ಪಡೆಯಬಹುದು.
-ಪ್ರೊ.ನವಕಾಂತ್‌ ಭಟ್‌,ನ್ಯಾನೊ ವಿಜ್ಞಾನಿ, ಐಐಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT