ಶನಿವಾರ, ಸೆಪ್ಟೆಂಬರ್ 26, 2020
22 °C

Covid-19 Karnataka Update | ಲಕ್ಷದತ್ತ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಹತ್ತು ದಿನಗಳಲ್ಲಿ ಅಂದಾಜು 50 ಸಾವಿರ ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ ಕೊರೊನಾದಿಂದ ಮುಕ್ತರಾದವರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ (99,126) ಸಾಗುತ್ತಿದೆ.

ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಸೋಮವಾರ 5,218 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಆಗಸ್ಟ್‌ 10ರಂದು ಒಂದೇ ದಿನ 4,267 ಮಂದಿಗೆ ಸೋಂಕು ತಗುಲಿದ್ದು, ಒಟ್ಟಾರೆ ಸೋಂಕಿತರ ಪ್ರಕರಣ 1,82,354ಕ್ಕೆ ತಲುಪಿದೆ. 114 ಮಂದಿ ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3,312ಕ್ಕೆ ಏರಿದೆ. 

ಸದ್ಯ 79,908 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 681 ಮಂದಿಯ ಆರೋಗ್ಯ ಗಂಭೀರವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕು ಪ್ರಕರಣ ಇಳಿಮುಖ: ಎರಡು ದಿನಗಳಿಂದ ರಾಜ್ಯದಲ್ಲಿ ಸೋಂಕು ಪ್ರಕರಣ ಇಳಿಮುಖ ಹಾದಿಯಲ್ಲಿ ಸಾಗಿದೆ. ಶನಿವಾರ (ಆ.8) ಮೊದಲ ಬಾರಿ ಏಳು ಸಾವಿರ ಗಡಿದಾಟಿತ್ತು. ಭಾನುವಾರ ಮತ್ತೆ 5,985ಕ್ಕೆ ಇಳಿಕೆಯಾಗಿದ್ದು, ಸೋಮವಾರ 4,267ಕ್ಕೆ ಕುಸಿದಿದೆ. ಪ್ರಸ್ತುತ ತಿಂಗಳಲ್ಲಿ ವರದಿಯಾದ ಕನಿಷ್ಠ ಸೋಂಕು ಪ್ರಕರಣಗಳು ಇವು. 

ಬೆಂಗಳೂರಿನಲ್ಲಿ 1,243 ಮಂದಿಯಲ್ಲಿ ಸೋಂಕಿರುವುದು ಸೋಮವಾರ ದೃಢಪಟ್ಟಿದೆ. 2 ಸಾವಿರ– 3 ಸಾವಿರ ಆಸುಪಾಸಿನಲ್ಲಿರುತ್ತಿದ್ದ ಸಂಖ್ಯೆ ಇಳಿಮುಖದತ್ತ ಸಾಗಿದೆ. ಮತ್ತೊಂದೆಡೆ 2,037 ಮಂದಿ ಚೇತರಿಸಿಕೊಂಡು ಮನೆ ಸೇರಿದ್ದಾರೆ.

ಮೈಸೂರು 374, ಬಳ್ಳಾರಿ 253, ದಾವಣಗೆರೆ 225 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 36, ದಾವಣಗೆರೆ 11, ದಕ್ಷಿಣ ಕನ್ನಡ 8 ಸೇರಿ 114 ಸೋಂಕಿತರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು