ಕೋವಿಡ್–19: ವಿದೇಶದಿಂದ ಬಂದವರಿಗೆ ಪರೀಕ್ಷೆ

ಬೆಂಗಳೂರು: ರಾಜ್ಯದ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಬಂದಿಳಿಯುವ ವಿದೇಶಿಯರಿಗೆ ಕಡ್ಡಾಯವಾಗಿ ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬ್ರಿಟನ್ ಸೇರಿದಂತೆ ವಿವಿಧ ದೇಶಗಳಲ್ಲಿ ಹೊಸ ಸ್ವರೂಪದ ಕೊರೊನಾ ವೈರಾಣು ಕಾಣಿಸಿಕೊಂಡ ಕಾರಣ ಅಲ್ಲಿಂದ ಬಂದವರ ಮೇಲೆ ಕಣ್ಗಾವಲು ಇಡಬೇಕಾಗಿದೆ. ವಿದೇಶದಿಂದ ಬರುವವರು ಪ್ರಯಾಣದ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ನಕಾರಾತ್ಮಕ ಪರೀಕ್ಷೆಯ ವರದಿ ಹೊಂದಿರಬೇಕು. ಈ ವರದಿ ಇಲ್ಲದವರಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು. ವಿಮಾನ ನಿಲ್ದಾಣ ಹಾಗೂ ಬಂದರುಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಈ ನಿಯಮ ಬುಧವಾರದಿಂದಲೇ (ಡಿ.23) ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಕೋವಿಡ್ ಪರೀಕ್ಷೆಗೆ ಪ್ರಯಾಣಿಕರ ಮಾದರಿ ಪಡೆದ ಬಳಿಕ ವರದಿ ಬರುವವರೆಗೂ ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಪಡಲು ಸೂಚಿಸಬೇಕು. ಪ್ರಯಾಣಿಕರು ಸರ್ಕಾರ ನಡೆಸುವ ಉಚಿತ ಆರ್‌ಟಿ–ಪಿಸಿಆರ್ ಪರೀಕ್ಷೆ ಅಥವಾ ತಮ್ಮದೇ ವೆಚ್ಚದಲ್ಲಿ ವಿಮಾನ ನಿಲ್ದಾಣದಲ್ಲಿ ನಡೆಸುವ ಕ್ಷಿಪ್ರ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಬಹುದಾಗಿದೆ. ಬ್ರಿಟನ್‌ನಿಂದ ಬಂದವರಿಗೆ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಲ್ಲಿ ಅದರ ಸ್ವರೂಪ ತಿಳಿಯಲು ಮಾದರಿಯನ್ನು ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅಲ್ಲಿಂದ ಬಂದವರು 28 ದಿನಗಳು ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.