ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಜಿಲ್ಲೆಗೆ ಐಸಿಎಂಆರ್‌ ತಂಡ ಭೇಟಿ; ಜನರ ರೋಗ ನಿರೋಧಕ ಶಕ್ತಿಯ ಅಧ್ಯಯನ

ಕಲಬುರ್ಗಿ ಜಿಲ್ಲೆಯ 10 ಕಡೆ ಐಸಿಎಂಆರ್‌ ತಂಡ ಭೇಟಿ, ಜನರ ರಕ್ತ ಮಾದರಿ ಸಂಗ್ರಹ
Last Updated 25 ಜೂನ್ 2021, 19:11 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕೋವಿಡ್‌ ಪ್ರಕರಣಗಳು ಹೆಚ್ಚು ವರದಿಯಾಗದ ಮತ್ತು ಕೋವಿಡ್‌ನಿಂದ ಸಾವು ಸಂಭವಿಸದ ಜಿಲ್ಲೆಯ 10 ಪ್ರದೇಶಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ತಜ್ಞರ ತಂಡ ಶುಕ್ರವಾರ ಭೇಟಿ ನೀಡಿ, ಹಲವು ಜನರ ರಕ್ತದ ಮಾದರಿ ಸಂಗ್ರಹಿಸಿತು.

ಚಿಂಚೋಳಿ ತಾಲ್ಲೂಕಿನ ನೀಮಾಹೊಸಹಳ್ಳಿಯಲ್ಲಿ ಮೂವರಿಗೆ ಮಾತ್ರ ಕೊರೊನಾ ಸೋಂಕು ತಗುಲಿದ್ದು, ಯಾರೂ ಸಾವನ್ನಪ್ಪಿಲ್ಲ ಎಂಬ ಮಾಹಿತಿಯನ್ನು ತಂಡದ ಸದಸ್ಯರು ದೃಢಪಡಿಸಿಕೊಂಡರು. ಈ ಗ್ರಾಮದಲ್ಲಿ ಲಸಿಕೆ ತೆಗೆದುಕೊಂಡವರು ಕೂಡ ಕಡಿಮೆ ಎಂಬ ಅಂಶ ಬೆಳಕಿಗೆ ಬಂತು.

‘ನೀಮಾಹೊಸಹಳ್ಳಿ ಗ್ರಾಮದಲ್ಲಿ 6 ರಿಂದ 9 ವರ್ಷದ ನಾಲ್ಕು ಮಕ್ಕಳು, 10 ರಿಂದ 17 ವರ್ಷ ವಯೋಮಾನದ ಎಂಟು ಮಕ್ಕಳು, 18 ವರ್ಷ ಮೇಲ್ಪಟ್ಟ 30 ಜನ ಹೀಗೆ ಒಟ್ಟು 42 ಜನರ ರಕ್ತದ ಮಾದರಿ ಸಂಗ್ರಹಿಸಿದ್ದೇವೆ. ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಈ ವರೆಗೆ ಎರಡು ಕುಟುಂಬಗಳ ಮೂವರಲ್ಲಿ ಮಾತ್ರ ಕೊರೊನಾ ಸೋಂಕು ದೃಢಪಟ್ಟಿತ್ತು. ಕೋವಿಡ್‌ ಲಸಿಕೆ ಪಡೆಯಲು ಇಲ್ಲಿಯ ಜನರು ನಿರಾಸಕ್ತಿ ತೋರುತ್ತಿದ್ದಾರೆ. ಈ ಎಲ್ಲಾ ಅಂಶಗಳ ಬಗ್ಗೆ ಸಮೀಕ್ಷೆ ಮಾಡಲಾಗುವುದು’ ಎಂದು ಸಮೀಕ್ಷೆಯ ನೋಡಲ್ ಅಧಿಕಾರಿ ಐಸಿಎಂಆರ್‌ನ ಡಾ. ಚೇತನ್‌ ರಂಗರಾಜ್ ತಿಳಿಸಿದರು.

‘ಗ್ರಾಮಸ್ಥರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ರಕ್ತದ ಮಾದರಿ ಪಡೆದಿದ್ದು, ಚೆನ್ನೈ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದರು.

ಕಲಬುರ್ಗಿಯ ಶ್ರೀನಿವಾಸ ಸರಡಗಿ, ಉಮರ್ ಕಾಲೊನಿಯ ವಾರ್ಡ್‌ ಸಂಖ್ಯೆ–13, ಹೀರಾಪುರ ವಾರ್ಡ್ ಸಂಖ್ಯೆ–38, ಆಳಂದ ತಾಲ್ಲೂಕಿನ ಚಿಂಚೋಳಿ (ಬಿ), ಅಫಜಲಪುರದ ಅರ್ಜುಣಗಿ, ಸೇಡಂ ತಾಲ್ಲೂಕಿನ ಮುಧೋಳ, ಚಿತ್ತಾಪುರದ ಭೀಮನಳ್ಳಿ, ಜೇವರ್ಗಿಯ ಯಲ್ಗೋಡಕ್ಕೆ ತಂಡದ ಸದಸ್ಯರು ಭೇಟಿ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಡಾ. ಸತೀಶ ಘಾಟಗೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದರೆಡ್ಡಿ ತಂಡದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT