ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 6–9 ತರಗತಿ ಬಂದ್‌

ಜಿಮ್‌, ಈಜುಕೊಳಕ್ಕೆ ಬಾಗಿಲು: 8 ಜಿಲ್ಲೆ – ಚಿತ್ರಮಂದಿರ, ಬಾರ್‌ ಗ್ರಾಹಕರ ಸಂಖ್ಯೆಗೆ ಮಿತಿ
Last Updated 2 ಏಪ್ರಿಲ್ 2021, 19:17 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಹರಡುವುದನ್ನು ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ, ‘ವಿದ್ಯಾಗಮ’ ಸೇರಿದಂತೆ 6 ರಿಂದ 9ರವರೆಗಿನ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸುವ ಕ್ರಮವೂ ಸೇರಿದಂತೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿ ಶುಕ್ರವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜಿಮ್‌ಗಳು, ಈಜುಕೊಳಗಳನ್ನು ಸಂಪೂರ್ಣ ಮುಚ್ಚಲಾಗುವುದು. ರ್‍ಯಾಲಿ, ಮುಷ್ಕರಗಳನ್ನೂ ನಿಷೇಧಿಸಲಾಗಿದೆ ಎಂದು ಮಾರ್ಗಸೂಚಿ ಹೇಳಿದೆ.

ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು, ಕಲಬುರ್ಗಿ, ದಕ್ಷಿಣಕನ್ನಡ, ಉಡುಪಿ, ಬೀದರ್‌ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಿನಿಮಾ ಹಾಲ್‌ಗಳಲ್ಲಿ ಶೇ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದೆ.

ಹೊಸ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ರ ಅಡಿ ಕ್ರಮ ಜರುಗಿಸಲಾಗುವುದು. ನಿರ್ಬಂಧಗಳು ಇದೇ 20 ರವರೆಗೆ ಚಾಲ್ತಿಯಲ್ಲಿರುತ್ತವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಾಮಾಜಿಕ, ಧಾರ್ಮಿಕ ಮತ್ತು ಸಾರ್ವಜನಿಕ ಸಭೆ, ಸಮಾರಂಭಗಳಾದ ಮದುವೆ, ರಾಜಕೀಯ ರ್‍ಯಾಲಿಗಳ ಸಂದರ್ಭದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳು ಪಾಲನೆಯಾಗದ ಕಾರಣ, ಸೋಂಕಿನ ಪ್ರಸರಣ ಸರಪಳಿ ನಿಗ್ರಹಿಸುವಲ್ಲಿ ರಾಜ್ಯ ಸಾಧಿಸಿದ ಗಮನಾರ್ಹ ಸಾಧನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಾರ್ಗಸೂಚಿ ಪ್ರಮುಖಾಂಶಗಳು:

* 10, 11 ಮತ್ತು 12 ನೇ ತರಗತಿಗಳು ಈಗ ಇರುವಂತೆಯೇ ಮುಂದುವರಿಯುತ್ತವೆ. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ.

*10,11 ಮತ್ತು 12 ನೇ ತರಗತಿಗಳನ್ನು ಹೊರತುಪಡಿಸಿ ಉಳಿದ ತರಗತಿಗಳ ವಿದ್ಯಾರ್ಥಿಗಳಿಗೆ (6 ರಿಂದ 9ನೇ ತರಗತಿ) ವಸತಿ ಶಾಲೆ, ಬೋರ್ಡಿಂಗ್‌ ಹಾಸ್ಟೆಲ್‌ಗಳು ಇರುವುದಿಲ್ಲ.

*ಉನ್ನತ ಶಿಕ್ಷಣ (ಕಾಲೇಜುಗಳು), ವೃತ್ತಿಪರ ಕೋರ್ಸ್‌ಗಳಿಗೆ ಪರೀಕ್ಷೆ ಬರೆಯುವವರು ಮತ್ತು ವೈದ್ಯಕೀಯ ಶಿಕ್ಷಣದ ತರಗತಿಗಳು ಎಂದಿನಂತೆ ನಡೆಯುತ್ತವೆ.

* ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪಾರ್ಥನೆ ಮಾಡಲು ಅವಕಾಶವಿದೆ. ಗುಂಪು ಸೇರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.

* ಅಪಾರ್ಟ್‌ಮೆಂಟ್‌, ಕಾಂಪ್ಲೆಕ್ಸ್‌ ಮತ್ತು ಜನ ಸೇರುವ ಸ್ಥಳಗಳಾದ ಜಿಮ್‌, ಪಾರ್ಟಿ ಹಾಲ್‌ಗಳು, ಕ್ಲಬ್‌ ಹೌಸ್‌ಗಳು, ಈಜುಕೊಳಗಳನ್ನು ಮುಚ್ಚಲಾಗುವುದು.

*ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿಪಡಿಸಿರುವ ಆಸನಗಳ ಮಿತಿಯನ್ನು ಮೀರುವಂತಿಲ್ಲ.

* ಕಚೇರಿಗಳು ಮತ್ತು ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಮಾಡಬೇಕು.

* ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಸಂಖ್ಯೆ ಶೇ 50 ಮೀರುವಂತಿಲ್ಲ.

* ಧಾರ್ಮಿಕ ಆಚರಣೆ, ಜಾತ್ರಾ ಮಹೋತ್ಸವ, ಮೇಳಗಳಲ್ಲಿ ಗುಂಪು ಸೇರುವುದು ನಿಷೇಧ.

* ಶಾಪಿಂಗ್‌ಮಾಲ್‌, ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್‌ಗಳು ಮತ್ತು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ಶಿಷ್ಟಾಚಾರದನ್ವಯ ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.

* ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳನ್ನು ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದರೆ ಕೋವಿಡ್‌ ಸಾಂಕ್ರಾಮಿಕ ಕೊನೆಗೊಳ್ಳುವವರೆಗೆ ಮುಚ್ಚಲಾಗುವುದು.

ಒಂದೇದಿನ 81,466 ಪ್ರಕರಣ:

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 81,466 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕಳೆದ ಆರು ತಿಂಗಳಲ್ಲಿ, ಒಂದು ದಿನದಲ್ಲಿ ವರದಿಯಾಗಿರುವ ಗರಿಷ್ಠ ಪ್ರಕರಣಗಳ ಸಂಖ್ಯೆ ಇದಾಗಿದೆ.

ಇದರೊಂದಿಗೆ ದೇಶದ ಕೋವಿಡ್‌ ಪ್ರಕರಣಗಳ ಸಂಖ್ಯೆ 1,23,03,131ಕ್ಕೆ ಏರಿದಂತಾಗಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ 469 ಸೋಂಕಿತರು ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 1,63,396ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಸತತ 23ನೇ ದಿನ ಗರಿಷ್ಠ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,14,696ಕ್ಕೆ ಏರಿದಂತಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT