ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಸದ್ಯಕ್ಕಿಲ್ಲ ರಾತ್ರಿ ಕರ್ಫ್ಯೂ, ವಾರದ ನಂತರ ನಿರ್ಧಾರ: ಸಿಎಂ ಬೊಮ್ಮಾಯಿ

Last Updated 9 ಡಿಸೆಂಬರ್ 2021, 10:48 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಒಂದು ವಾರ ಪರಿಸ್ಥಿತಿ ನೋಡಿ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕ್ರಿಸ್‌ಮಸ್ಮತ್ತು ಹೊಸ ವರ್ಷ ಆಚರಣೆಯ ವಿಚಾರವಾಗಿ ಮುಂದಿನ ವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಹೇಳಿದರು.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌ ಅವರು ಸಂಪುಟ ಸಭೆಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಕೋವಿಡ್‌ ದೃಢ ಸಂಖ್ಯೆ ನೋಡಿದಾಗ ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ವಿಶೇಷವಾಗಿ ಹಾಸ್ಟೆಲ್‌ಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಸ್ಟೆಲ್‌ಗಳಲ್ಲಿ ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್‌ ಮಾಡುವುದು, ಹಾಸ್ಟೆಲ್‌ಗಳಿಗೆ ಭೇಟಿ ನೀಡುವವರ ಸಂಖ್ಯೆಯನ್ನು ಕಡಿಮೆ ಮಾಡುವುದು, ಅಡುಗೆ ಮತ್ತಿತರ ಕೆಲಸ ಮಾಡುವವರಿಗೆ ಎರಡು ಡೋಸ್‌ ಲಸಿಕೆ ನೀಡುವುದು, ಸೋಂಕಿತರನ್ನು ಪ್ರತ್ಯೇಕಗೊಳಿಸಲು ಐಸೋಲೇಶನ್‌ ಕೊಠಡಿ ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಕಳೆದ ಎರಡು ಮೂರು ತಿಂಗಳ ಹಿಂದೆ ಕೋವಿಡ್‌ ಲಸಿಕೆಯ ವಿಶೇಷ ಅಭಿಯಾನ ನಡೆಸಿದಂತೆ ಮತ್ತೊಮ್ಮೆ ವಿಶೇಷ ಅಭಿಯಾನ ನಡೆಸಬೇಕು. ಈವರೆಗೆ ಲಸಿಕೆ ಪಡೆಯದವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಸಚಿವರು ಸಲಹೆ ನೀಡಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಕೇರಳದಿಂದ ಬರುವ ವಿದ್ಯಾರ್ಥಿಗಳು ಮತ್ತು ಇತರರು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ಬರುವುದು ಕಡ್ಡಾಯ. ಉಳಿದಂತೆ ಈಗ ಇರುವ ಮಾರ್ಗಸೂಚಿಯನ್ನೇ ಮುಂದುವರಿಸಲಾಗುವುದು. ಕ್ಲಸ್ಟರ್‌ ನಿರ್ವಹಣೆ ಕಟ್ಟುನಿಟ್ಟಾಗಿ ಮಾಡಲಾಗುವುದು. ಮೂರು ಜನರಿಗೆ ಕೋವಿಡ್‌ ದೃಢಪಟ್ಟರೆ ಕ್ಲಸ್ಟರ್ ಎಂದು ಪರಿಗಣಿಸಲಾಗುವುದು. ಹೊಸದಾಗಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT