ಗುರುವಾರ , ಜನವರಿ 21, 2021
29 °C
ಲಸಿಕೆ ವಿತರಣೆಗೆ 29 ಸಾವಿರ ಕೇಂದ್ರಗಳು

ಕೋವಿಡ್‌-19: ಲಸಿಕೆ ವಿತರಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಾದ್ಯಂತ ಕೋವಿಡ್‌ಲಸಿಕೆ ವಿತರಣೆಗೆ ಸಿದ್ಧತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಕೂಡ ಲಸಿಕೆ ವಿತರಣೆಗಾಗಿ ಸುಮಾರು 29,451 ಕೇಂದ್ರಗಳನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದೆ.

ಪ್ರಧಾನಿ ಮೋದಿ ಮಂಗಳವಾರ ನಡೆಸಿದ ವರ್ಚುವಲ್‌ ಸಭೆಯ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ರಾಜ್ಯದಲ್ಲಿ ನಡೆಸಿರುವ ಸಿದ್ಧತೆಗಳ ಕುರಿತು ವಿವರ ನೀಡಿದರು.

‘ಕೋವಿಡ್‌ ಲಸಿಕೆ ವಿತರಣೆಗೆ ರಾಜ್ಯ ಸರ್ಕಾರಗಳು ಸಜ್ಜಾಗಬೇಕು. ಚುನಾವಣೆ ಸಂದರ್ಭದಲ್ಲಿ ಬೂತ್‌ಗಳನ್ನು ತಯಾರಿ ಮಾಡಿಕೊಳ್ಳುವಂತೆ, ಲಸಿಕೆ ವಿತರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು ಎಂದು ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯ ಮಟ್ಟದಲ್ಲಿ ತಕ್ಷಣವೇ ಸಂಚಾಲನ ಸಮಿತಿ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಬೇಕು. ಬ್ಲಾಕ್‌ ಮಟ್ಟದಲ್ಲೂ ವ್ಯವಸ್ಥೆ ಮಾಡಬೇಕು. ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ಈ ಸಂಬಂಧ ತರಬೇತಿ ನೀಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕು. 2 ರಿಂದ 3 ಡೋಸ್‌ ಲಸಿಕೆ ನೀಡಬೇಕಾಗಬಹುದು. ಪ್ರತಿಯೊಬ್ಬ ವ್ಯಕ್ತಿಗೂ ನೀಡುವ ಲಸಿಕೆಯ ಮಾಹಿತಿಯನ್ನು ಡಿಜಿಟಲ್‌ ವೇದಿಕೆಯಲ್ಲಿ ಸಂಗ್ರಹಿಸಿ ಇಡಲಾಗುವುದು ಎಂದೂ ಹೇಳಿದ್ದಾರೆ’ ಎಂದರು.

‘ಕೋವಿಡ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಶೇ 1 ಕ್ಕಿಂತಲೂ ಕಡಿಮೆ ಇರಬೇಕು ಮತ್ತು ಪಾಸಿಟಿವ್‌ ಸಂಖ್ಯೆ ಶೇ 5 ಮೀರಬಾರದು. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸೇರಿ ಕೆಲವು ರಾಜ್ಯಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ’ ಎಂದರು.

‘ಉಳಿದ ರಾಜ್ಯಗಳು, ಅದನ್ನು ಅನುಕರಿಸಬೇಕು. ಲಸಿಕೆ ನೀಡಿದರೂ ಕೂಡ ಚಿಕಿತ್ಸೆ ಮುಂದುವರಿಯುತ್ತದೆ. ದೇಶದಲ್ಲಿ ಎರಡನೇ ಅಲೆ ಆರಂಭವಾಗಿರುವುದರಿಂದ ಜನ ಮೈಮರೆಯಬಾರದೆಂಬ ಎಚ್ಚರಿಕೆ ನೀಡಿದ್ದಾರೆ’ ಎಂದು ಬೊಮ್ಮಾಯಿ ವಿವರ ನೀಡಿದರು.

ವ್ಯಾಕ್ಸಿನೇಟರ್‌ ಸಿಬ್ಬಂದಿ: ‘ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಲಸಿಕೆ ವಿತರಣೆಗಾಗಿ ಕೋವಿಡ್ ಕಾರ್ಯಪಡೆ ರಚನೆ ಮಾಡಲಾಗಿದೆ. ಅಲ್ಲದೆ, ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ವಿತರಣೆ ಕೇಂದ್ರಗಳಲ್ಲಿ ಲಸಿಕೆ ವಿತರಿಸಲು 10,008 ವ್ಯಾಕ್ಸಿನೇಟರ್ ಸಿಬ್ಬಂದಿ  ಗುರುತಿಸಲಾಗಿದೆ’ ಎಂದು ಡಾ. ಸುಧಾಕರ್‌ ಹೇಳಿದರು.

‘ಸರ್ಕಾರಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಕುರಿತು ಮಾಹಿತಿ ದಾಖಲಿಸಲಾಗಿದೆ. ಶೇ 80 ರಷ್ಟು ಖಾಸಗಿ ಆಸ್ಪತ್ರೆಗಳು ಮಾಹಿತಿ ನೀಡಿವೆ. ಉಳಿದ ಶೇ 20ರಷ್ಟು ಆಸ್ಪತ್ರೆಗಳು ವಾರದೊಳಗೆ ಮಾಹಿತಿ ನೀಡಲಿವೆ’ ಎಂದರು.

‘ಕೇಂದ್ರ ಸರ್ಕಾರ ಈಗಾಗಲೇ ಡೀಪ್ ಫ್ರೀಜರ್ ಹಾಗೂ ರೆಫ್ರಿಜರೇಟರ್‌ಗಳನ್ನು ಮಂಜೂರು ಮಾಡಿದೆ. ಹೆಚ್ಚುವರಿ ಅಗತ್ಯಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಪಶು ಸಂಗೋಪನೆ ಇಲಾಖೆಯಲ್ಲಿ ಲಭ್ಯವಿರುವ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಕಾರ್ಪೊರೇಟ್ ಖಾಸಗಿ ಆಸ್ಪತ್ರೆಗಳ ಕೋಲ್ಡ್ ಸ್ಟೋರೇಜ್ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ’ ಎಂದೂ ಅವರು ವಿವರಿಸಿದರು.

2,855 ಶೀತಲೀಕರಣ ಕೇಂದ್ರ
ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗಾಗಿ 2,855 ಶೀತಲೀಕರಣ ಕೇಂದ್ರಗಳು ಲಭ್ಯವಿದೆ ಎಂದು ಡಾ.ಸುಧಾಕರ್‌ ತಿಳಿಸಿದರು.

ಸಾರ್ವಜನಿಕರಿಗೆ ಲಸಿಕೆ ಶೀಘ್ರ ವಿತರಿಸಲು ಸಾಧ್ಯವಾಗುವಂತೆ, ಹೊಸದಾಗಿ ಬೆಂಗಳೂರು ನಗರ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದೆ. ಈ ಕೇಂದ್ರಗಳಿಗೆ ವಾಕ್ ಇನ್ ಕೂಲರ್, ವಾಕ್ ಇನ್ ಫ್ರೀಜರ್ ನೀಡುವ ಪ್ರಸ್ತಾಪವೂ ಇದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 10 ವಾಕ್ ಇನ್ ಕೂಲರ್ ಮತ್ತು 4 ವಾಕ್ ಇನ್ ಫ್ರೀಜರ್‌ಗಳು ಇವೆ. ಕೇಂದ್ರ ಆರೋಗ್ಯ ಸಚಿವಾಲಯ 3 ವಾಕ್ ಇನ್ ಕೂಲರ್, 2 ವಾಕ್ ಇನ್ ಫ್ರೀಜರ್ ನೀಡಲಿದೆ. ಇದಕ್ಕಾಗಿ ಸಿವಿಲ್ ಕಾಮಗಾರಿ ಆರಂಭವಾಗಿದೆ. ಕೋಲ್ಟ್‌ ಸ್ಟೋರೇಜ್‌ ಮತ್ತು ಸಂಗ್ರಹಕ್ಕೆ ಸಂಬಂಧಿಸಿದಂತೆ, ಡೋಸ್‌ಗಳು ಮತ್ತಿತರ ಮಾಹಿತಿ ಅಗತ್ಯವಿದೆ. ಈ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋರಲಾಗಿದೆ. ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಡ್ರೈ ಸ್ಟೋರೇಜ್ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸುಧಾಕರ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು