ಭಾನುವಾರ, ಮಾರ್ಚ್ 26, 2023
23 °C

ಕೋವಿಡ್: ಮೀಸಲು ಹಾಸಿಗೆ ಸಂಖ್ಯೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದರಿಂದ ಸೋಂಕಿತರಿಗೆ ಮೀಸಲಿರಿಸಿದ ಹಾಸಿಗೆಗಳಲ್ಲಿ ಶೇ 30ರಷ್ಟನ್ನು ಅನ್ಯರೋಗಿಗಳಿಗೆ ಬಳಸಲು ಅವಕಾಶ ಮಾಡಿಕೊಡಲಾಗಿದೆ.

ಫೆಬ್ರವರಿಯಲ್ಲಿ ಕೆಲ ದಿನಗಳು 500ರ ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳ ಸಂಖ್ಯೆ ಏಪ್ರಿಲ್ ತಿಂಗಳಲ್ಲಿ 50 ಸಾವಿರದ ಆಸುಪಾಸು ತಲುಪಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷದ ಗಡಿ ದಾಟಿತ್ತು. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಜತಗೆ ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಸರ್ಕಾರವು ಗುರುತಿಸಿತ್ತು.

ಕಳೆದೊಂದು ತಿಂಗಳಿನಿಂದ ಸೋಂಕಿತರ ಸಂಖ್ಯೆ ಇಳಿಮುಖ ಮಾಡಿರುವ ಪರಿಣಾಮ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿದ್ದ ಹಾಸಿಗೆಗಳಲ್ಲಿ ಶೇ 86 ರಷ್ಟು ಹಾಸಿಗೆಗಳು ಖಾಲಿ ಉಳಿದಿವೆ. ಹೀಗಾಗಿ, ಹಂತ ಹಂತವಾಗಿ ಹಾಸಿಗೆಗಳ ಸಂಖ್ಯೆಯನ್ನು ಕಡಿತಮಾಡಿ, ಕೋವಿಡೇತರ ಚಿಕಿತ್ಸೆಗೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ಕೋವಿಡ್ ಚಿಕಿತ್ಸೆಗೆ ಜೂನ್ ಮೊದಲ ವಾರದಲ್ಲಿ 63,761 ಹಾಸಿಗೆಗಳು ಮೀಸಲಿದ್ದವು. ಆ ಸಂಖ್ಯೆ ಈಗ 45,720ಕ್ಕೆ ಇಳಿಕೆಯಾಗಿದೆ. 18,041 ಹಾಸಿಗೆಗಳನ್ನು ಈಗಾಗಲೇ ಕೋವಿಡೇತರ ಚಿಕಿತ್ಸೆಗೆ ಬಳಸಿಕೊಳ್ಳಲಾಗಿದೆ. ಐಸಿಯು ಹಾಸಿಗೆಗಳ ಸಂಖ್ಯೆಯನ್ನು 3,321ರಿಂದ 2,799ಕ್ಕೆ, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 3,014ರಿಂದ 2,203ಕ್ಕೆ ಹಾಗೂ ಎಚ್‌ಡಿಯು ಹಾಸಿಗೆಗಳನ್ನು 26,817ರಿಂದ 10,569ಕ್ಕೆ ಇಳಿಕೆ ಮಾಡಲಾಗಿದೆ.

ಕೊರೊನಾ ಸೋಂಕಿತರಲ್ಲಿ ಶೇ 90ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಶೇ 5ರಷ್ಟು ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಹಾಗಾಗಿ, ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳ ಸಂಖ್ಯೆಯು ಇನ್ನಷ್ಟು ಇಳಿಕೆ ಮಾಡಿ, ಮೂರನೇ ಅಲೆ ಮುನ್ಸೂಚನೆ ದೊರೆತರೆ ಮತ್ತೆ ಹೆಚ್ಚಳ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು