ಸೋಮವಾರ, ಮೇ 16, 2022
28 °C
ನಾನಾ ಕಾರಣಗಳಿಂದ ಬಹುತೇಕರು ಕೇಂದ್ರಗಳಿಗೆ ಗೈರು

ಲಸಿಕೆ: ಶೇ 11ರಷ್ಟು ಮಂದಿ ಮಾತ್ರ ಹಾಜರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಪ‍ಡೆಯಲು ಭಾನುವಾರ ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಶೇ 11ರಷ್ಟು ಮಂದಿ ಮಾತ್ರ ಹಾಜರಾಗಿದ್ದಾರೆ. ಇದು ಈವರೆಗೆ ದಿನವೊಂದಕ್ಕೆ ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಅತೀ ಕಡಿಮೆ ಹಾಜರಿಯಾಗಿದೆ.

ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಮಾತ್ರ ಲಸಿಕೆ ವಿತರಣೆ ಅಭಿಯಾನ ನಡೆದಿದೆ. ಈ ಜಿಲ್ಲೆಗಳಿಂದ 178 ಕೇಂದ್ರಗಳಲ್ಲಿ 16,697 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 1,758 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದವರು ಹಿಂಜರಿಕೆ, ವಾರಾಂತ್ಯ ರಜೆ ಸೇರಿದಂತೆ ನಾನಾ ಕಾರಣಗಳಿಂದ ಗೈರಾಗಿದ್ದಾರೆ. ಬೆಂಗಳೂರಿನಲ್ಲಿ ಶೇ 33ರಷ್ಟು, ಮೈಸೂರಿನಲ್ಲಿ ಶೇ 30ರಷ್ಟು ಮಂದಿ ಹಾಜರಾಗಿದ್ದರು. ಕೊಪ್ಪಳ (ಶೇ 3ರಷ್ಟು), ಕಲಬುರ್ಗಿ (ಶೇ 6ರಷ್ಟು) ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೋವಿಡ್‌ ಲಸಿಕೆ ಪಡೆದವರಲ್ಲಿ ಯಾವುದೇ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜ.16ರಿಂದ ಈವರೆಗೆ ನಿಗದಿಪಡಿಸಲಾಗಿದ್ದ 8.02 ಲಕ್ಷ ಫಲಾನುಭವಿಗಳಲ್ಲಿ 3.87 ಲಕ್ಷ ಮಂದಿ ಹಾಜರಾಗಿ, ಲಸಿಕೆ ಹಾಕಿಸಿಕೊಂಡಿದ್ದಾರೆ. ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಶೇ 48ರಷ್ಟು ಮಂದಿ ಮಾತ್ರ ಹಾಜರಾಗಿದ್ದಾರೆ.

487 ಮಂದಿಗೆ ಸೋಂಕು: ರಾಜ್ಯದಲ್ಲಿ ಹೊಸದಾಗಿ 487 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.42 ಲಕ್ಷ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಮೈಸೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,236ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 493 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 9.24 ಲಕ್ಷ ದಾಟಿದೆ.

5,959 ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 141 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಒಂದೇ ದಿನ 74 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ 1.75 ಕೋಟಿ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 250 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ. ಮೈಸೂರಿನಲ್ಲಿ ಮತ್ತೆ 38 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 53,576ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ 30, ತುಮಕೂರಿನಲ್ಲಿ 23, ಕಲಬುರ್ಗಿಯಲ್ಲಿ 20, ಬೀದರ್‌ನಲ್ಲಿ 18 ಪ್ರಕರಣಗಳು ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು