ಶನಿವಾರ, ಜುಲೈ 24, 2021
20 °C

3ನೇ ಅಲೆ: ಎಲ್ಲ ತಾಲ್ಲೂಕಿನಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ಮೂರನೇ ಅಲೆ ಎದುರಿಸಲು ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ ಮಾಡಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ರಾಜ್ಯದಲ್ಲಿ ಈವರೆಗೂ 0-9 ವಯಸ್ಸಿನ 67,687 ಮತ್ತು 9ರಿಂದ 18 ವಯಸ್ಸಿನ 1,70,565 ಮಕ್ಕಳು ಸೇರಿ ಒಟ್ಟು 0-18 ವಯೋಮಾನದ 2,38,252 ಮಕ್ಕಳಿಗೆ ಕೊರೊನಾ ಸೋಂಕು ತಗಲಿ. ಕಳೆದೊಂದು ವರ್ಷದಲ್ಲಿ (2020 ಮಾರ್ಚ್‌ನಿಂದ 2021 ಮೇ) ಕೋವಿಡ್‌ನಿಂದ 117 ಮಕ್ಕಳು ಮೃತಪಟ್ಟಿದ್ದಾರೆ. 50 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು, ಈ ಪೈಕಿ, ಇಬ್ಬರು ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ’ ಎಂದರು.

‘ಅನಾಥ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಮೂಲಕ ಸಹಾಯಧನ ನೀಡಲಾಗುವುದು. ಈ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ ₹ 3,500 ನೀಡಲಾಗುವುದು. ಜೊತೆಗೆ, ಉಚಿತ ಶಿಕ್ಷಣ ನೀಡಲಾಗುವುದು. 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹ 1 ಲಕ್ಷ ನೀಡಲು ತೀರ್ಮಾನಿಸಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಸಂಬಂಧಿಗಳು ಶಕ್ತರಿಲ್ಲದಿದ್ದರೆ ಇಲಾಖೆ ಮೂಲಕ ದತ್ತು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ದಾನಿಗಳು ಅವರ ಜೀವನ ಭವಿಷ್ಯ ರೂಪಿಸಲು ಮುಂದೆ ಬಂದರೆ ಇಲಾಖೆ ಕೊಂಡಿಯಾಗಿ ಕೆಲಸ ಮಾಡಲಿದೆ’ ಎಂದೂ ತಿಳಿಸಿದರು.

‘ಕೋವಿಡ್‌ ಮೂರನೇ ಅಲೆ ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಮತ್ತು ಪೊಲೀಸ್ ಇಲಾಖೆ ಮಕ್ಕಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ಸೋಂಕು ದೃಢಪಟ್ಟರೆ ಕೊವಿಡ್ ಆರೈಕೆ ಕೇಂದ್ರಕ್ಕೆ ಮಗುವಿನೊಂದಿಗೆ ತಾಯಿಯೂ ಇರಲು ಅವಕಾಶ ನೀಡಲಾಗಿದೆ. ಯುವತಿಯರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು’ ಎಂದರು.

ಮಕ್ಕಳ ಕೋವಿಡ್ ಆಸ್ಪತ್ರೆಗೆ ಚಿಂತನೆ: ‘ಬೆಂಗಳೂರು ನಗರ ಜಿಲ್ಲೆಯಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆಯುವಂತೆ ಸಲಹೆ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 1419 ಹಾಸಿಗೆಗಳನ್ನು ಗುರುತಿಸಲಾಗಿದೆ. 141 ವೆಂಟಿಲೇಟರ್ ಸೌಲಭ್ಯದ ಐಸಿಯು ಹಾಸಿಗೆಗಳು, 116 ಐಸಿಯುರಹಿತ ಹಾಸಿಗೆಗಳು, 430 ಎಚ್‌ಡಿಯು ಹಾಸಿಗೆಗಳು, 712 ಸಾಮಾನ್ಯ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಹಾಸಿಗೆ ಬೇಡಿಕೆ ಇದೆ. ಮಕ್ಕಳಿಗೆ ಪ್ರತ್ಯೇಕವಾದ ಮಾಸ್ಕ್, ವೆಂಟಿಲೇಟರ್, ಹಾಸಿಗೆ, ಔಷಧ, ಮಾತ್ರೆ ಬೇಕಾಗಿದ್ದು, ಅದರ ಸಿದ್ದತೆಯೂ ನಡೆಯುತ್ತಿದೆ. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಮಕ್ಕಳ ತಜ್ಞರನ್ನು ಗುರುತಿಲಾಗಿದೆ’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರು ಮುಂಚೂಣಿ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದು, ಕೋವಿಡ್‌ನಿಂದ ನಿಧನ ಹೊಂದಿದರೆ ₹ 30 ಲಕ್ಷ ಪರಿಹಾರ ನೀಡಲಾಗುತ್ತದೆ.  ಕಳೆದೊಂದು ವರ್ಷದಲ್ಲಿ  20 ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟಿದ್ದು, 15 ಮಂದಿಗೆ ಪರಿಹಾರ ವಿತರಿಸಲಾಗಿದೆ’ ಎಂದರು.

‘ಜಿಲ್ಲೆಗಳಲ್ಲಿ ಒಟ್ಟು 22,871 ಗರ್ಭಿಣಿಯರು, 19,131 ಬಾಣಂತಿಯರು, 97 ಕಿಶೋರಿಯರು ಇದ್ದಾರೆ. 124 ಮಕ್ಕಳು ತೀವ್ರ ಅಪೌಷ್ಡಿಕತೆ, 9,761 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 39 ಪೋಕ್ಸೊ ಪ್ರಕರಣಗಳು ನಡೆದಿದ್ದು, 37 ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. ಕಳೆದೊಂದು ವರ್ಷದಲ್ಲಿ 168 ಬಾಲ್ಯವಿವಾಹದ ದೂರುಗಳು ಬಂದಿವೆ. 122 ಬಾಲ್ಯ ವಿವಾಹ ತಡೆಯಲಾಗಿದೆ. 28 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಾರಿಯ ಲಾಕ್‌ಡೌನ್ ಅವಧಿಯಲ್ಲಿ, ಏಪ್ರಿಲ್‌ನಿಂದ ಇಲ್ಲಿಯವರೆಗೆ ಮೂರು ಬಾಲ್ಯ ವಿವಾಹದ ದೂರುಗಳು ಬಂದಿದ್ದು, ಎರಡು ಬಾಲ್ಯ ವಿವಾಹ ತಡೆಹಿಡಿಯಲಾಗಿದೆ. ಒಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹೊರಗಡೆಯಿಂದ ಬೆಂಗಳೂರಿಗೆ ವಲಸೆ ಬಂದಿರುವ 513 ಮಕ್ಕಳಿಗೆ ಆಹಾರ ವಿತರಿಸಲಾಗಿದೆ’ ಎಂದು ಸಚಿವರು ವಿವರಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಅದು ಯಶಸ್ವಿಯಾದರೆ ಮುಂದಿನ ತೀರ್ಮಾನ ಪ್ರಧಾನಿ, ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ. ಶಾಲೆ ತೆರೆಯುವ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವುದು. ತಜ್ಞರ ವರದಿಯಲ್ಲಿ ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ’ ಎಂದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊರತೆಯಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಳವಾಗಿದ್ದು ಸಮಸ್ಯೆಯಾಗಿತ್ತು. ಗ್ರಾಮ ಪಂಚಾಯತಿಯಿಂದ ಮೊಟ್ಟೆ ವಿತರಣೆಗೆ ಸೂಚಿಸಲಾಗಿದೆ. ಪಂಚಾಯಿತಿಯಲ್ಲಿ ಹಣದ ಕೊರತೆ ಬಗ್ಗೆ ಯಾವುದೇ ದೂರು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು