ಬುಧವಾರ, ಆಗಸ್ಟ್ 17, 2022
26 °C

ಕೋವಿಡ್-19 ಪ್ರಕರಣಗಳ ಇಳಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣದ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆ ದರ ಮತ್ತು ಮರಣ ಪ್ರಮಾಣವು ಗಣನೀಯ ಇಳಿಕೆ ಕಂಡುಬಂದಿದೆ. ಹಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಹಾಗೂ ಸಂಪರ್ಕ ಪತ್ತೆ ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳು ವರದಿಯಾದ ಕೋವಿಡ್ ಪ್ರಕರಣಗಳನ್ನು ‘ಜೀವನ್ ರಕ್ಷಾ’ ಯೋಜನೆಯಡಿ ತಜ್ಞರು ವಿಶ್ಲೇಷಿಸಿದ್ದಾರೆ.

‘ರಾಜ್ಯದಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದು ಕೋವಿಡ್ ತಾಂತ್ರಿಕ ಪಡೆಯ ತಜ್ಞರು ಎಚ್ಚರಿಸಿದ್ದಾರೆ. ಆದರೆ, ಇದೇ ವೇಳೆ ಕೋವಿಡ್ ನಿಯಂತ್ರಣದಲ್ಲಿ ದಕ್ಷಿಣದ ರಾಜ್ಯಗಳಲ್ಲಿಯೇ ಕರ್ನಾಟಕವು ಉತ್ತಮ ಸಾಧನೆ ಮಾಡಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ಅಕ್ಟೋಬರ್‌ ತಿಂಗಳಿಗೆ ಹೋಲಿಸಿದಲ್ಲಿ ನವೆಂಬರ್ ತಿಂಗಳಲ್ಲಿ ಪ್ರಕರಣಗಳ ಬೆಳವಣಿಗೆಯ ದರವು ರಾಜ್ಯದಲ್ಲಿ ಶೇ 71ರಷ್ಟು ಇಳಿಕೆ ಕಂಡಿದೆ. ಆಂಧ್ರ ಪ್ರದೇಶದಲ್ಲಿ ಶೇ 64ರಷ್ಟು, ಕೇರಳದಲ್ಲಿ ಶೇ 26ರಷ್ಟು, ತಮಿಳುನಾಡಿನಲ್ಲಿ ಶೇ 53ರಷ್ಟು ವ್ಯತ್ಯಾಸ ಕಂಡುಬಂದಿದೆ. ದಕ್ಷಿಣದ ರಾಜ್ಯಗಳಲ್ಲಿ ಶೇ 31ರಷ್ಟಿದ್ದ ರಾಜ್ಯದ ಪಾಲು, ಶೇ 18ಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ 2,11,575 ಪ್ರಕರಣಗಳು ವರದಿಯಾಗಿದ್ದವು. ನವೆಂಬರ್‌ನಲ್ಲಿ 61,485 ಪ್ರಕರಣಗಳು ಪತ್ತೆಯಾಗಿವೆ.

ಪರೀಕ್ಷೆ ಹೆಚ್ಚಳ ಅಗತ್ಯ: ಮರಣ ಪ್ರಮಾಣದಲ್ಲಿ ಸಹ ರಾಜ್ಯದಲ್ಲಿ ಶೇ 72 ರಷ್ಟು ಇಳಿಕೆ ಕಂಡಿದೆ. ಇದು ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಅತ್ಯಧಿಕವಾಗಿದೆ. ಅಕ್ಟೋಬರ್‌ನಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಸಂಭವಿಸಿದ ಕೋವಿಡ್ ಮರಣ ಪ್ರಕರಣಗಳಲ್ಲಿ ಶೇ 41ರಷ್ಟು ಮಂದಿ ಇಲ್ಲಿಯವರಾಗಿದ್ದರು. ಈಗ ಆ ಪ್ರಮಾಣ ಶೇ 27ಕ್ಕೆ ಇಳಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ 2,174 ಮಂದಿ ಮೃತಪಟ್ಟರೇ, ನವೆಂಬರ್ ತಿಂಗಳಲ್ಲಿ 610 ಮಂದಿ ಸಾವಿಗೀಡಾಗಿದ್ದಾರೆ.

‘ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹಾಗೂ ಮೃತರ ಸಂಖ್ಯೆ ಇಳಿಕೆ ಕಂಡಿದೆ. ಈ ವೇಳೆ ಎರಡನೇ ಅಲೆ ಬರದಂತೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪರೀಕ್ಷೆ ಹಾಗೂ ಸಂಪರ್ಕ ಪತ್ತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕಿದೆ. ಆಗ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ’ ಎಂದು ಜೀವನ್ ರಕ್ಷಾ ಯೋಜನೆಯ ಸಂಚಾಲಕ ಮೈಸೂರು ಸಂಜೀವ್ ತಿಳಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು