ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಹೋಟೆಲ್ ಪ್ರತ್ಯೇಕ ವಾಸಕ್ಕೆ ಅವಕಾಶ

Last Updated 6 ಜನವರಿ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ನಡೆಸುವ ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಸೋಂಕಿತರಾಗುವ ವಿದೇಶಿ ಪ್ರಯಾಣಿಕರು ಲಕ್ಷಣ ರಹಿತರಾಗಿದ್ದರೆ ಹಣ ಪಾವತಿಯ ಆಧಾರದಲ್ಲಿ ಅವರನ್ನು ಹೋಟೆಲ್‌ ಪ್ರತ್ಯೇಕವಾಸಕ್ಕೂ ಒಳಪಡಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಬಗ್ಗೆ ಇಲಾಖೆಯ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ‘ಕೋವಿಡ್‌ ಸೋಂಕು ಹೆಚ್ಚು ಇರುವ ದೇಶಗಳಿಂದ ಬರುತ್ತಿರುವವರು ಹಾಗೂ ಆಯ್ದ ವಿದೇಶಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸೋಂಕಿತರಲ್ಲಿ ಶೇ 90ಕ್ಕೂ ಅಧಿಕ ಮಂದಿಗೆ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಸೌಮ್ಯ ಲಕ್ಷಣಗಳು ಕಾಣಿಸಿಕೊಂಡವರು ಮೂರು ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದುಡಿ. ರಂದೀಪ್ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ತೀವ್ರ ಹಾಗೂ ಗಂಭೀರವಾಗಿ ಅಸ್ವಸ್ಥಗೊಂಡವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿರುತ್ತದೆ. ಹೀಗಾಗಿ, ವಿದೇಶದಿಂದ ಬಂದು ಸೋಂಕಿತರಾದ ಲಕ್ಷಣ ರಹಿತರು ಹಾಗೂ ಸೌಮ್ಯ ಲಕ್ಷಣ ಹೊಂದಿರುವವರಿಗೆ ಸರ್ಕಾರಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕ ವಾಸಕ್ಕೆ ಒಳಪಡಿಸಬೇಕು. ಈ ಕೇಂದ್ರಗಳಲ್ಲಿ ಆರೈಕೆಗೆ ಒಳಗಾದವರು ಹಣ ಪಾವತಿಸಬೇಕಾಗಿಲ್ಲ. ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ತಾರಾ ಹೋಟೆಲ್‌ಗಳಲ್ಲಿಯೂ ಹಣ ಪಾವತಿ ಆಧಾರದಲ್ಲಿ ಪ್ರತ್ಯೇಕ ವಾಸಕ್ಕೆ ಒಳಪಡಬಹುದು. ಪ್ರತ್ಯೇಕ ವಾಸಕ್ಕೆ ಒಳಗಾದವರಿಗೆಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿದರೆ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕು’ ಎಂದು ಸೂಚಿಸಿದ್ದಾರೆ.

‘ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕ ವಾಸಕ್ಕೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾದವರನ್ನು 7ನೇ ದಿನ ಮನೆಗೆ ಕಳುಹಿಸಬೇಕು. ಮೊದಲ ಮೂರು ದಿನಗಳು ಜ್ವರ ಸೇರಿದಂತೆ ಕೋವಿಡ್‌ನ ಯಾವುದೇ ಲಕ್ಷಣಗಳು ಇರಬಾರದು. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 94 ಹಾಗೂ ಅದಕ್ಕಿಂತ ಹೆಚ್ಚಳ ಇರಬೇಕು. 7 ನೇ ದಿನವೂ ಲಕ್ಷಣವಿದ್ದಲ್ಲಿ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಬೇಕು. ಮನೆಗೆ ತೆರಳಿದ ಬಳಿಕವೂ 7 ದಿನ ಪ್ರತ್ಯೇಕ ವಾಸಕ್ಕೆ ಒಳಗಾಗಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT