ಮಂಗಳವಾರ, ಜನವರಿ 25, 2022
25 °C

ರಾಜ್ಯದಲ್ಲಿ ಕೋವಿಡ್ ಕ್ಲಸ್ಟರ್‌ ಪ್ರಕರಣ ಹೆಚ್ಚಳ, ವರದಿ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಕ್ಲಸ್ಟರ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಇರುವ ಕ್ಲಸ್ಟರ್‌ಗಳಲ್ಲಿ 119 ಹೆಚ್ಚುವರಿ ಪ್ರಕರಣಗಳು ವರದಿಯಾಗಿವೆ. 

ಸೋಮವಾರ ಮಧ್ಯಾಹ್ನದವರೆಗಿನ ಅಧಿಕೃತ ದತ್ತಾಂಶದ ಪ್ರಕಾರ 38 ಕ್ಲಸ್ಟರ್‌ಗಳಲ್ಲಿ ಒಟ್ಟು 784 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕಳೆದ 14 ದಿನಗಳಲ್ಲಿ 4,500 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಕ್ಲಸ್ಟರ್‌ಗಳ ಪಾಲು ಶೇ 17.4ರಷ್ಟಿದೆ. ಇದೇ 2ರವರೆಗೆ ಒಟ್ಟು 28 ಕ್ಲಸ್ಟರ್‌ಗಳಲ್ಲಿ 665 ಪ್ರಕರಣಗಳು ದಾಖಲಾಗಿದ್ದವು. ಈ ಬೆಳವಣಿಗೆಯು ಕೋವಿಡ್‌ ಎರಡನೇ ಅಲೆಗೂ ಮುನ್ನವಿದ್ದ ಪರಿಸ್ಥಿತಿ ನೆನಪಿಸುವಂತಿದೆ. 

ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಈವರೆಗೆ 312 ಪ್ರಕರಣಗಳು ವರದಿಯಾಗಿವೆ. ಕ್ಲಸ್ಟರ್‌ಗಳಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಈ ಕಾಲೇಜಿನ ಪಾಲು ಶೇ 39.7ರಷ್ಟಿದೆ. ಮೈಸೂರು ನಂತರದ ಸ್ಥಾನದಲ್ಲಿದೆ. ಈ ನಗರದಲ್ಲಿನ 5 ಕ್ಲಸ್ಟರ್‌ಗಳಲ್ಲಿ 116 ಪ್ರಕರಣಗಳು ಪತ್ತೆಯಾಗಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 16 ಕ್ಲಸ್ಟರ್‌ಗಳಲ್ಲಿ 100 ‍ಪ್ರಕರಣಗಳು ದಾಖಲಾಗಿವೆ. ಕ್ಲಸ್ಟರ್‌ ಹಾಗೂ ಅದರ ಸಮೀಪ ವಾಸವಿರುವ 20,497 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 784 ಮಂದಿಗೆ ಸೋಂಕು ತಗುಲಿದೆ.

‘ನಗರ ಪ್ರದೇಶಗಳಲ್ಲಿ ಒಂದೊಂದು ಮನೆಯಲ್ಲಿ ಐದಾರು ಮಂದಿ ನೆಲೆಸಿರುತ್ತಾರೆ. ಈ ಪೈಕಿ ಒಬ್ಬರಿಗೆ ಸೋಂಕು ತಗುಲಿದರೆ ಉಳಿದವರಿಗೂ ಅದು ಹರಡುತ್ತದೆ. ಕುಟುಂಬದಲ್ಲಿ ಮೂವರು ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟರೆ ಅದನ್ನು ಕ್ಲಸ್ಟರ್‌ ಎಂದೇ ಪರಿಗಣಿಸಲಾಗುತ್ತದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ ಚಂದ್ರ ಹೇಳಿದ್ದಾರೆ. 

 

 

ಅಕ್ಟೋಬರ್‌ನಲ್ಲೇಕೆ ಏರಲಿಲ್ಲ?:

ಅಕ್ಟೋಬರ್‌‌ನಲ್ಲಿ ವಿವಿಧ ಹಬ್ಬಗಳು ಇದ್ದರೂ, ಆ ತಿಂಗಳಲ್ಲಿ ಕ್ಲಸ್ಟರ್‌ ಪ್ರಕರಣಗಳು ಏರಿಕೆ ಕಂಡಿಲ್ಲ. ನವೆಂಬರ್‌ ಕೊನೆಯಿಂದ ಏರಿಕೆ ಕಂಡುಬರುತ್ತಿದೆ.

‘ಜನರ ನಿರ್ಲಕ್ಷ್ಯದಿಂದಾಗಿ ಈಗ ಕೋವಿಡ್‌ ಪ್ರಕರಣಗಳು ಏರುಗತಿ ಪಡೆದುಕೊಂಡಿವೆ’ ಎಂದು ನಿಮ್ಹಾನ್ಸ್‌ ಆಸ್ಪತ್ರೆಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರದೀಪ್‌ ಬದನೂರು ತಿಳಿಸಿದ್ದಾರೆ.

‘ಕೋವಿಡ್‌ ನಿಯಮಾವಳಿಗಳನ್ನು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಿಂದೆಲ್ಲಾ ಈಗಿನಂತೆ ಜನ ಗುಂಪು ಸೇರುತ್ತಿರಲಿಲ್ಲ. ಶಾಲಾ–ಕಾಲೇಜುಗಳು ದೀಪಾವಳಿ ಹಬ್ಬದ ಬಳಿಕ ಕಾರ್ಯಾರಂಭ ಮಾಡಿವೆ. ಹೀಗಾಗಿ ಕೋವಿಡ್‌ ಪ್ರಕರಣಗಳು ಏರು‌ಗತಿಯಲ್ಲಿ ಸಾಗಿವೆ’ ಎಂದರು. 

ನೋಡಲ್‌ ಅಧಿಕಾರಿಗಳ ನೇಮಕ

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್‌ ವೇಗವಾಗಿ ಹರಡದಂತೆ ತಡೆಯಲು, ಅದರ ಮೇಲೆ ವಿಶೇಷ ನಿಗಾ ಇಡಲು ರಾಜ್ಯ ಸರ್ಕಾರವು 8 ಮಂದಿ ಉನ್ನತ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿದೆ. ಎಲ್ಲರಿಗೂ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.

ನೋಡಲ್‌ ಅಧಿಕಾರಿಗಳು: ಮುನೀಶ್ ಮೌದ್ಗಿಲ್‌ (ರಾಜ್ಯ ವಾರ್‌ ರೂಂ ಹಾಗೂ ವೈದ್ಯಕೀಯ ಆಮ್ಲಜನಕ ಪೂರೈಕೆ ಮೇಲೆ ನಿಗಾ), ಪಂಕಜ್‌ ಕುಮಾರ್‌ ಪಾಂಡೆ (ಮನೆ ಆರೈಕೆಯಲ್ಲಿರುವವರ ಮೇಲೆ ನಿಗಾ), ಎಂ.ಶಿಖಾ (ಅಂತರರಾಷ್ಟ್ರೀಯ ಪ್ರಯಾಣಿಕರ ತಪಾಸಣೆಯ ಮೇಲುಸ್ತುವಾರಿ), ಪ್ರತಾಪ್‌ ರೆಡ್ಡಿ ಹಾಗೂ ಗುಂಜನ್‌ ಕೃಷ್ಣ (ಆಮ್ಲಜನಕ ಪೂರೈಕೆ), ಶಿಲ್ಪಾ ನಾಗ್‌ (ರಾಜ್ಯ ಸರ್ವೆಲೆನ್ಸ್‌ ಘಟಕದ ಅಧಿಕಾರಿ), ಕುಮಾರ್‌ ಪುಷ್ಕರ್‌ (ಆಸ್ಪತ್ರೆಗಳಲ್ಲಿನ ಹಾಸಿಗೆ ನಿರ್ವಹಣಾ ವ್ಯವಸ್ಥೆ), ಎಂ.ಟಿ.ರೇಜು (ಔಷಧ).

ಜಿನೋಮ್‌ ಸೀಕ್ವೆನ್ಸಿಂಗ್‌: ಇನ್ನೂ ಕೈಸೇರದ ಫಲಿತಾಂಶ
ಬೆಂಗಳೂರು: ಓಮೈಕ್ರಾನ್‌ ಸೋಂಕಿತರ ನೇರ ಸಂಪರ್ಕದಿಂದ ಕೋವಿಡ್‌ ದೃಢಪಟ್ಟಿರುವ ನಗರದ 9 ಮಂದಿಯ ವೈರಾಣು ವಂಶವಾಹಿ ಸಂಚರಣೆ ವಿಶ್ಲೇಷಣೆ (ಜಿನೋಮ್‌ ಸೀಕ್ವೆನ್ಸಿಂಗ್‌) ವರದಿ ಇನ್ನೂ ಬಿಬಿಎಂಪಿ ಕೈಸೇರಿಲ್ಲ. 

‘ಫಲಿತಾಂಶ ಸೋಮವಾರ ಕೈಸೇರುವ ನಿರೀಕ್ಷೆ ಇತ್ತು. ಆದರೆ, ವರದಿ ಇನ್ನೂ ತಲುಪಿಲ್ಲ. ಮಂಗಳವಾರ ಕೈಸೇರುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಕೆ.ವಿ.ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು