ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಗೌರವಧನ ನೀಡಲು ಎಚ್‌ಡಿಕೆ ಒತ್ತಾಯ

Last Updated 23 ಮೇ 2021, 13:27 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಕ್ಷಣವೇ ರಾಜ್ಯ ಸರ್ಕಾರ ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಬೇಕು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ವಿಚಾರವಾಗಿ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಅವರು, '3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಇಲ್ಲ. ಸಂಬಳವನ್ನೆ ನಂಬಿರುವ ಅವರ ಬದುಕು ದುಸ್ತರವಾಗಿದೆ. ಕೋವಿಡ್ ಮೊದಲ ಅಲೆಯಲ್ಲಿ ಜೀವಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಜೊತೆಗೆ ತಲಾ ₹3 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದ ಸರ್ಕಾರ ಶೇಕಡಾ 50ರಷ್ಟು ಮಂದಿಗೆ ಕೊಟ್ಟು ಉಳಿದವರಿಗೆ ವಂಚಿಸಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಕೋವಿಡ್-19 ನಿಯಂತ್ರಣಕ್ಕಾಗಿ ಶ್ರಮಿಸಿದ 16 ಮಂದಿ ಆಶಾ ಕಾರ್ಯಕರ್ತೆಯರು ಈ ವರೆಗೆ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಕೊರೋನಾ ವೈರಸ್‌ ಸೋಂಕಿತರಾಗಿದ್ದಾರೆ. ಮಾಸಿಕ ಗೌರವಧನ ಕೊಡುವಲ್ಲಿ ಸೋತಿರುವ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕೊರೋನಾ ವಾರಿಯರ್ಸ್ ಎಂದು ಬಾಯಿಮಾತಿನಲ್ಲಿ ಹೇಳಿದ ಸರ್ಕಾರ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಸಕಾಲಕ್ಕೆ ಗೌರವಧನ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ದುಡಿದವರಿಗೆ ಗೌರವಧನ ಕೊಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ 1250 ಕೋಟಿ ರೂಗಳ ಪ್ಯಾಕೇಜನ್ನು ಅನುಷ್ಠಾನಗೊಳಿಸುತ್ತದೆ ಎಂಬುದು ಭ್ರಮೆ ಅಲ್ಲದೆ ಮತ್ತೇನು?' ಎಂದು ಎಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

'ಕೊರೋನಾ ವಾರಿಯರ್ಸ್ ಎಂದು ಹಣೆಪಟ್ಟಿ ಹಚ್ಚಿದ ಸರ್ಕಾರ ಒಬ್ಬ ಆಶಾ ಕಾರ್ಯಕರ್ತೆಗೆ ಮಾತ್ರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಉಳಿದ 15 ಮಂದಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಇಂತಹ ಬೇಜವಾಬ್ದಾರಿಗಳಿಂದ ಬೇಸತ್ತು ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೋವಿಡ್ 19 ನಿಯಂತ್ರಣ ಕೈ ಮೀರುತ್ತದೆ. ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆ ಕೂಡ' ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT