ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: ಎಲ್ಲ ಜಿಲ್ಲೆಗಳಲ್ಲೂ ಹೊಸ ಪ್ರಕರಣ ಪತ್ತೆ

Last Updated 11 ಏಪ್ರಿಲ್ 2021, 18:52 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ವೇಗವಾಗಿ ವ್ಯಾಪಿಸಿಕೊಳ್ಳಲಾರಂಭಿಸಿದ್ದು, 24 ಗಂಟೆಗಳ ಅವಧಿಯಲ್ಲಿ 10,250 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ಕಳೆದ ವರ್ಷ ಅ.10ರಂದು ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿತ್ತು. ಬಳಿಕ ಇಳಿಮುಖ ಕಂಡಿತ್ತು. ವರ್ಷದ ಪ್ರಾರಂಭದಲ್ಲಿ ದಿನವೊಂದಕ್ಕೆ 500ರ ಗಡಿಯ ಆಸುಪಾಸಿಗೆ ಬಂದಿದ್ದ ಹೊಸ ಪ್ರಕರಣಗಳು, ಈಗ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಏರುಗತಿ ಪಡಿದಿದೆ. ಈ ತಿಂಗಳು 11 ದಿನಗಳಲ್ಲಿಯೇ 68,286 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಕೋವಿಡ್ ರಾಜ್ಯಕ್ಕೆ ಕಾಲಿಟ್ಟ ದಿನದಿಂದ ಈವರೆಗೆ ಸೋಂಕಿತರಾದವರ ಸಂಖ್ಯೆ 10.65 ಲಕ್ಷ ದಾಟಿದೆ.

ರಾಜ್ಯದಲ್ಲಿ ಒಂದು ದಿನದ ಅವಧಿಯಲ್ಲಿ 1.32 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 7,584 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಅದೇ ರೀತಿ, ಕಲಬುರ್ಗಿ (291), ಬೀದರ್ (290), ಮೈಸೂರು (277), ಹಾಸನ (170), ತುಮಕೂರು (150), ಧಾರವಾಡ (150), ದಕ್ಷಿಣ ಕನ್ನಡ (133), ಬಳ್ಳಾರಿ (103), ರಾಯಚೂರು (103) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 27 ಮಂದಿ ಸೇರಿದಂತೆ ರಾಜ್ಯದಲ್ಲಿ 40 ಮಂದಿ ಸಾವಿಗೀಡಾಗಿದ್ದಾರೆ. ಬೆಳಗಾವಿ ಮತ್ತು ಮೈಸೂರಿನಲ್ಲಿ ತಲಾ ಮೂವರು, ಕಲಬುರ್ಗಿಯಲ್ಲಿ ಇಬ್ಬರು, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್, ಶಿವಮೊಗ್ಗ, ವಿಜಯಪುರದಲ್ಲಿ ತಲಾ ಒಬ್ಬರು ಸಾವಿಗೀಡಾಗಿರುವುದು ದೃಢಪಟ್ಟಿದೆ. ಇವರಲ್ಲಿ ಆರು ಮಂದಿ ಮನೆಯಲ್ಲಿಯೇ ಮರಣ ಹೊಂದಿದ್ದಾರೆ. ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 12,889ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರ ದಾಟಿದ್ದು, ಸದ್ಯ ರಾಜ್ಯದಲ್ಲಿ 69,225 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 440 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಕೊರೊನಾ ಸೋಂಕಿತರಲ್ಲಿ 2,638 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9.83 ಲಕ್ಷ ದಾಟಿದೆ.

ಕೋವಿಡ್ : ನಿಷೇಧಾಜ್ಞೆ ಜಾರಿ ಸೂಕ್ತ

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಹತ್ತಿಕ್ಕಬೇಕು. ಮದುವೆ, ಸಮಾರಂಭಗಳಿಗೆ ಕಟ್ಟುನಿಟ್ಟಾಗಿ ನಿರ್ಬಂಧ ವಿಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಪಾಯ ಎದುರಿಸಬೇಕಾಗುತ್ತದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಸಿದ್ದಾರೆ.

‘ಐಸ್‌ಕ್ರೀಂ ಪಾರ್ಲರ್, ಚಾಟ್‌ ಫುಡ್‌ ವಿತರಣೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜನರು ಗುಂಪು ಸೇರುತ್ತಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಬರಬೇಕಾದರೆ ಗುಂಪು ಸೇರುವುದನ್ನು ಕಡಿಮೆ ಮಾಡಲೇಬೇಕು. 144 ಸೆಕ್ಷನ್ ಅನ್ನು ಸರ್ಕಾರವು ಕಠಿಣವಾಗಿ ಜಾರಿಗೆ ತರಬೇಕು. ನಗರ ಪ್ರದೇಶದ ಜತೆಗೆ ಹಳ್ಳಿ ಪ್ರದೇಶಗಳಿಗೂ ಇದನ್ನು ಅನ್ವಯಿಸಬೇಕು’ ಎಂದು ತಿಳಿಸಿದರು.

ಕೋವಿಡ್‌ ಪ್ರಕರಣಗಳ ಏರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ವಿವಿಧೆಡೆ ಕೋವಿಡ್ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ. ಜನ ಒಂದೆಡೆ ಗುಂಪಾಗಿ ಸೇರಿದಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ, ಜಾತ್ರೆ, ಮದುವೆ ಹಾಗೂ ಸಮಾರಂಭಗಳಲ್ಲಿ ನಿರ್ಬಂಧಗಳು ಪಾಲನೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಈಗ ಬೆಂಗಳೂರಿನಲ್ಲಿ ದಿನೇ ದಿನೇ ಪ್ರಕರಣ ಹೆಚ್ಚುತ್ತಿದ್ದು, ಇದೇ ರೀತಿ ಏರಿಕೆ ಕಂಡಲ್ಲಿ ಮೇ 15ರ ವೇಳೆಗೆ 15 ಸಾವಿರಕ್ಕೆ ಹೋಗಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT