ಭಾನುವಾರ, ಮೇ 22, 2022
25 °C
ಗರಿಷ್ಠ ಪರೀಕ್ಷೆ ನಡೆಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೂರನೇ ಸ್ಥಾನ

ರಾಜ್ಯದಲ್ಲಿ 6 ಕೋಟಿ ದಾಟಿದ ಕೊರೊನಾ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ನಡೆಸಲಾದ ಒಟ್ಟು ಕೊರೊನಾ ಪತ್ತೆ ಪರೀಕ್ಷೆಗಳ ಸಂಖ್ಯೆ 6 ಕೋಟಿಯ ಗಡಿ ದಾಟಿದೆ. ದೇಶದಲ್ಲಿ ಗರಿಷ್ಠ ಪರೀಕ್ಷೆಗಳನ್ನು ನಡೆಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 

ರಾಜ್ಯದಲ್ಲಿ 2020ರ ಮಾರ್ಚ್‌ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಆಗ ರಾಜ್ಯದಲ್ಲಿ  ಪರೀಕ್ಷೆಗೆ ಪ್ರಯೋಗಾಲಯಗಳು ಇಲ್ಲದಿದ್ದರಿಂದ ಸೋಂಕು ಶಂಕಿತರ ಮಾದರಿಗಳನ್ನು ಪುಣೆಗೆ ಕಳುಹಿಸಲಾಗುತ್ತಿತ್ತು. ಈಗ ರಾಜ್ಯದಲ್ಲಿ 268 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ದೈನಂದಿನ ಪರೀಕ್ಷೆ ಸಾಮರ್ಥ್ಯ 2.50 ಲಕ್ಷಕ್ಕೆ ಏರಿಕೆಯಾಗಿದೆ. 

2020ರಲ್ಲಿ 1.41 ಕೋಟಿ ಪರೀಕ್ಷೆಗಳು, 2021ರಲ್ಲಿ 4.23 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ. ಈ ವರ್ಷ ಈಗಾಗಲೇ 35.27 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೋವಿಡ್ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ವಾರದಿಂದ ದೈನಂದಿನ ಪರೀಕ್ಷೆಗಳ ಸಂಖ್ಯೆ 2 ಲಕ್ಷದ ಆಸುಪಾಸಿನಲ್ಲಿದೆ. 

ರಾಜ್ಯದಲ್ಲಿ ನಡೆಸಲಾದ ಒಟ್ಟು ಕೋವಿಡ್ ಪರೀಕ್ಷೆಗಳಲ್ಲಿ ಶೇ 70 ರಷ್ಟು ಪರೀಕ್ಷೆಗಳನ್ನು ಆರ್‌ಟಿ–ಪಿಸಿಆರ್ ವಿಧಾನದ ಮೂಲಕ ನಡೆಸಲಾಗಿದೆ. ಶೇ 30 ರಷ್ಟು ಪರೀಕ್ಷೆಗಳನ್ನು ರ್‍ಯಾಪಿಡ್ ಆ್ಯಂಟಿಜೆನ್ ವಿಧಾನದಲ್ಲಿ ಮಾಡಲಾಗಿದೆ. 

ಮಕ್ಕಳ ಪರೀಕ್ಷೆಗೆ ಆದ್ಯತೆ: ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುವ ಬಗ್ಗೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಕಳವಳ ವ್ಯಕ್ತಪಡಿಸಿತ್ತು. ದಿನವೊಂದಕ್ಕೆ ನಡೆಸಲಾಗುವ ಒಟ್ಟು ಪರೀಕ್ಷೆಗಳಲ್ಲಿ ಶೇ 10 ರಷ್ಟು ಪರೀಕ್ಷೆಗಳನ್ನು 18 ವರ್ಷದೊಳಗಿನ ಮಕ್ಕಳಿಗೆ ನಡೆಸುವಂತೆ ಸಮಿತಿ ಸದಸ್ಯರು ಶಿಫಾರಸು ಮಾಡಿದ್ದರು. 2021ರ ಡಿ.1ರಿಂದ 2022ರ ಜ.20ರ ಅವಧಿಯಲ್ಲಿ ನಡೆಸಲಾದ ಒಟ್ಟು ಪರೀಕ್ಷೆಯಲ್ಲಿ ಶೇ 29 ರಷ್ಟು ಪ‍ರೀಕ್ಷೆಗಳನ್ನು ಮಕ್ಕಳಿಗೆ ಮಾಡಲಾಗಿದೆ. ಶಾಲಾ–ಕಾಲೇಜು, ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಸಾಮೂಹಿಕವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

‘ನಮ್ಮ ಆರೋಗ್ಯ ಕಾರ್ಯಕರ್ತರ ಕಾರ್ಯ ಶ್ಲಾಘನೀಯ. ಮೂರು ವರ್ಷಗಳಿಂದ ಕೋವಿಡ್ ನಿಯಂತ್ರಣಕ್ಕೆ ಅವರು ನಿರಂತರ ಶ್ರಮಿಸುತ್ತಿದ್ದಾರೆ’ ಎಂದು ಇಲಾಖೆಯ ಆಯುಕ್ತ ಡಿ. ರಂದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು