ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಅಂಕೆ ಮೀರಿದರೆ ಲಾಕ್‌ಡೌನ್‌? ವಾರಾಂತ್ಯದೊಳಗೆ ನಿರ್ಧಾರ ಸಾಧ್ಯತೆ

ಆರಂಭದಲ್ಲೇ ಬಿಗಿ ಕ್ರಮಕ್ಕೆ ಟಿಎಸಿ ಶಿಫಾರಸು
Last Updated 2 ಜನವರಿ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಹೊಸ ಪ್ರಕರಣಗಳ ದೃಢ ಪ್ರಮಾಣ ದರದ ಆಧಾರದಲ್ಲಿ ವಲಯವಾರು ನಿರ್ಬಂಧಗಳ ಜಾರಿಗೆ ರಾಜ್ಯ ಮಟ್ಟದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಲಹೆ ನೀಡಿದೆ. ಕೋವಿಡ್‌ ದೃಢ ಪ್ರಮಾಣದ ದರ ಶೇ 5 ದಾಟಿದರೆ ಅಂತಹ ಪ್ರದೇಶಗಳಲ್ಲಿ ‘ಲಾಕ್‌ಡೌನ್‌’ ಜಾರಿಗೂ ಶಿಫಾರಸು ಮಾಡಲಾಗಿದೆ.

ಓಮೈಕ್ರಾನ್‌ ಸೋಂಕಿನ ಪ್ರಕರಣಗಳ ಹೆಚ್ಚಳ ಮತ್ತು ಒಟ್ಟಾರೆ ಕೋವಿಡ್‌ ಪ್ರಕರಣಗಳ ಏರಿಕೆಯನ್ನು ವಿಶ್ಲೇಷಣೆ ಮಾಡಿರುವ ಸಮಿತಿ ಡಿಸೆಂಬರ್‌ 29ಕ್ಕೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪರಿಸ್ಥಿತಿಯು ಕೈಮೀರದಂತೆ ತಡೆಯಲು ತಕ್ಷಣದಿಂದಲೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಶಿಫಾರಸು ವರದಿಯಲ್ಲಿದೆ.

ಒಂದು ವಾರದಲ್ಲಿ ವರದಿಯಾದ ಹೊಸ ಸೋಂಕು ಪ್ರಕರಣಗಳ ದೃಢಪ್ರಮಾಣ ದರ ಶೇ 1ಕ್ಕಿಂತ ಕಡಿಮೆ ಇರುವ ಪ್ರದೇಶವನ್ನು ಹಳದಿ ವಲಯ ಎಂದು ಘೋಷಿಸಬೇಕು. ಈ ದರ ಶೇ 1 ರಿಂದ 2ರಷ್ಟು ಇದ್ದರೆ ಕಿತ್ತಳೆ ವಲಯ ಮತ್ತು ಶೇ 3ರಷ್ಟನ್ನು ಮೀರುವ ಪ್ರದೇಶಗಳನ್ನು ಕೆಂಪು ವಲಯ ಎಂಬುದಾಗಿ ಘೋಷಿಸಬೇಕು ಎಂದು ಟಿಎಸಿ ವರದಿ ಹೇಳಿದೆ.

‘ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಶೇ 3ಕ್ಕಿಂತ ಹೆಚ್ಚಾದ ಪ್ರದೇಶ ಗಳಲ್ಲಿ ಲಾಕ್‌ಡೌನ್‌ ಜಾರಿಗೆ ಕ್ರಮ ಜರುಗಿಸಬೇಕು. ಒಂದು ವಾರದ ಅವಧಿಯಲ್ಲಿನ ಹೊಸ ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರದ ಸರಾಸರಿ ಶೇ 5ರಷ್ಟನ್ನು ಮೀರಿದರೆ ಅಥವಾ ಆಮ್ಲಜನಕ ಸಹಿತ ಅಥವಾ ಐಸಿಯು ಹಾಸಿಗೆಗಳಲ್ಲಿ ಶೇ 40ರಷ್ಟು ಭರ್ತಿಯಾದರೆ ಲಾಕ್‌ಡೌನ್‌ ಜಾರಿಗೊಳಿಸಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕಿತ್ತಳೆ ಮತ್ತು ಕೆಂಪು ವಲಯಗಳಿಗೆ ಸೇರುವ ಪ್ರದೇಶಗಳಲ್ಲಿ ಹಲವು ಬಿಗಿಯಾದ ನಿರ್ಬಂಧಗಳ ಜಾರಿಗೆ ಶಿಫಾರಸು ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆ ಸ್ಥಗಿತ, ವ್ಯಾಪಾರ ವಹಿವಾಟಿಗೆ ಅರ್ಧ ದಿನ ಮಾತ್ರ ಅವಕಾಶ ಸೇರಿದಂತೆ ಹಲವು ನಿರ್ಬಂಧಗಳನ್ನು ಸಮಿತಿ ಶಿಫಾರಸು ಮಾಡಿದೆ.

ಟಿಎಸಿ ವರದಿ ಆಧಾರದಲ್ಲಿ ಬಿಗಿಯಾದ ನಿರ್ಬಂಧಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಲಾಕ್‌ಡೌನ್‌ ಜಾರಿಗೊಳಿಸಬೇಕಾದ ಅನಿವಾರ್ಯ ಸೃಷ್ಟಿಯಾಗದಂತೆ ತಪ್ಪಿಸಲು ಆರಂಭದಲ್ಲೇ ಕೆಲವು ನಿರ್ಬಂಧಗಳ ಜಾರಿಗೆ ಸರ್ಕಾರ ಒಲವು ಹೊಂದಿದೆ. ವಾರಾಂತ್ಯದೊಳಗೆ ಈ ಸಂಬಂಧ ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಸಮಾರಂಭಗಳಲ್ಲಿ ಜನರಿಗೆ ಮಿತಿ

ಮದುವೆ, ಇತರ ಸಾಮಾಜಿಕ ಸಮಾರಂಭಗಳು, ಅಂತ್ಯಸಂಸ್ಕಾರ ಮತ್ತು ಮರಣೋತ್ತರ ವಿಧಿವಿಧಾನಗಳ ಕಾರ್ಯಕ್ರಮಗಳಿಗೆ ಜನಸಂಖ್ಯೆಯ ಮಿತಿಯನ್ನು ತಗ್ಗಿಸುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಹಳದಿ ವಲಯದಲ್ಲಿ ಮದುವೆ ಮತ್ತು ಇತರ ಸಮಾರಂಭಗಳಿಗೆ 200 ರಿಂದ 300 ಜನ ಹಾಗೂ ಅಂತ್ಯಕ್ರಿಯೆ ಮತ್ತು ಮರಣೋತ್ತರ ಕ್ರಿಯೆಗಳಲ್ಲಿ 100 ರಿಂದ 200 ಜನರು ಮಾತ್ರ ಭಾಗವಹಿಸಬೇಕು. ಕಿತ್ತಳೆ ವಲಯದಲ್ಲಿ ಈ ಸಂಖ್ಯೆ ಅನುಕ್ರಮವಾಗಿ 100 ರಿಂದ 200 ಮತ್ತು 50 ರಿಂದ 100 ಮಾತ್ರ ಇರಬೇಕು ಎಂದು ಟಿಎಸಿ ಸಲಹೆ ನೀಡಿದೆ.

ಕೆಂಪು ವಲಯದಲ್ಲಿ ಮದುವೆ ಮತ್ತು ಇತರ ಸಮಾರಂಭಗಳಿಗೆ 50 ರಿಂದ 100 ಹಾಗೂ ಅಂತ್ಯಕ್ರಿಯೆ ಮತ್ತು ಮರಣೋತ್ತರ ಕ್ರಿಯೆಗಳಲ್ಲಿ 20 ರಿಂದ 50 ಜನರು ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಶಿಫಾರಸು ಮಾಡಲಾಗಿದೆ.

ಕಿತ್ತಳೆ ವಲಯದಲ್ಲಿ ಬರುವ ಧಾರ್ಮಿಕ ಸ್ಥಳಗಳು, ಉದ್ಯಾನ, ಮನರಂಜನಾ ಪಾರ್ಕ್‌, ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಗಳಲ್ಲಿ ನಿರ್ಬಂಧ ಜಾರಿಗೊಳಿಸಬೇಕು. ಕೆಂಪು ವಲಯದಲ್ಲಿ ಈ ಎಲ್ಲವನ್ನೂ ಬಂದ್‌ ಮಾಡಬೇಕು ಎಂದು ಟಿಎಸಿ ಸಲಹೆ ಮಾಡಿದೆ.

‘3ನೇ ಅಲೆ ಸಾಧ್ಯತೆ’

ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ‘ಕೋವಿಡ್‌ ಮೂರನೇ ಅಲೆ ಬರುವುದು ನಿಶ್ಚಿತ ಎಂಬ ಸನ್ನಿವೇಶವಿದೆ. ಎರಡನೇ ಅಲೆಯಲ್ಲಿ ಎದುರಾದ ಸಮಸ್ಯೆಗಳು ಮರುಕಳಿಸುವುದನ್ನು ತಪ್ಪಿಸಲು ಬಿಗಿ ಕ್ರಮ ಅನಿವಾರ್ಯ. ಸಿ.ಎಂ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT