ಶುಕ್ರವಾರ, ಮೇ 20, 2022
19 °C

ಕೋವಿಡ್: ವಾರಾಂತ್ಯ ಕರ್ಫ್ಯೂ ಕುರಿತು ನಿರ್ಧಾರ– ಬೊಮ್ಮಾಯಿ ನೇತೃತ್ವದ ಸಭೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪ್ರಕರಣ ಕಡಿಮೆ ಇರುವ ಜಿಲ್ಲೆಗಳಲ್ಲಿ ರಾತ್ರಿ, ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಳ್ಳುವ, ಬೆಂಗಳೂರು ಸೇರಿದಂತೆ ಕೆಲವೆಡೆ ಮುಚ್ಚಿರುವ ಶಾಲೆ–ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಶುಕ್ರವಾರ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 1ಗಂಟೆಗೆ ಸಭೆ ನಡೆಯಲಿದ್ದು, ಸಚಿವರು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ಭಾಗಿಯಾಗಲಿದ್ದಾರೆ. ನಿರ್ಬಂಧ ಸಡಿಲಗೊಳಿಸುವ ಬಗ್ಗೆ ತಜ್ಞರು ನೀಡುವ ಶಿಫಾರಸು ಆಧರಿಸಿ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ. 

ಕರ್ಫ್ಯೂ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಪಾದಿಸಿದ್ದಾರೆ. ಕೈಗಾರಿಕೆ, ಹೋಟೆಲ್‌ ಹಾಗೂ ವಿವಿಧ ಸಂಘಟನೆಗಳು ವಾರಾಂತ್ಯ ಕರ್ಫ್ಯೂ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿವೆ.

ಈ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಕೋವಿಡ್ ನಿಯಂತ್ರಿಸುವ ಸಲುವಾಗಿ ರಾತ್ರಿ ಮತ್ತು ವಾರಾಂತ್ಯ ಎರಡು ದಿನ ಕರ್ಫ್ಯೂ ಹೇರಲಾಗಿತ್ತು. ಈ ಕ್ರಮಕ್ಕೆ ವಿರೋಧ ಪಕ್ಷದ ಕಾಂಗ್ರೆಸ್, ವಿವಿಧ ಸಂಘ ಸಂಸ್ಥೆಗಳು, ಉದ್ದಿಮೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಶುಕ್ರವಾರದ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.  

ಕಾಂಗ್ರೆಸ್, ಜೆಡಿಎಸ್ ನಾಯಕರು ನೀಡಿದ ಸಲಹೆ, ಕೇಂದ್ರ ಸರ್ಕಾರದ ನಿರ್ದೇಶನ, ತಜ್ಞರು ನೀಡುವ ಶಿಫಾರಸು ಆಧರಿಸಿ ಹೊಸ ಮಾರ್ಗಸೂಚಿ ಹೊರಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. 18ರಿಂದ 20 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಹಾಗಿದ್ದರೂ ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದರು.

ಸಾರ್ವಜನಿಕರ ಸಹಕಾರ ಇಲ್ಲದೇ ಕೋವಿಡ್ ಕಡಿಮೆ ಮಾಡಲು ಆಗುವುದಿಲ್ಲ. ನಮ್ಮಲ್ಲಿ ಸಾವು–ನೋವುಗಳ ಸಂಖ್ಯೆ ಕಡಿಮೆ ಇರುವುದು ಸಮಾಧಾನದ ಸಂಗತಿ. ಆರ್ಥಿಕ ವ್ಯವಹಾರವೊಂದನ್ನೇ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು