ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಡೋಸ್ ಪಡೆಯದ 45 ಲಕ್ಷ ಜನ: ಡಾ.ಕೆ. ಸುಧಾಕರ್‌

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌
Last Updated 27 ನವೆಂಬರ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೊದಲನೇ ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವವರ ಪೈಕಿ 45 ಲಕ್ಷ ಮಂದಿ ಇನ್ನೂ ಎರಡನೇ ಡೋಸ್‌ ಪಡೆದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಶೇ 90ರಷ್ಟು ಜನರು ಮೊದಲನೇ ಡೋಸ್‌ ಪಡೆದಿದ್ದಾರೆ. ಶೇ 57ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಹೊಸ ತಳಿಯ ಕೊರೊನಾ ವೈರಾಣು ಪತ್ತೆಯಾಗಿರುವುದರಿಂದ ಮುನ್ನೆಚ್ಚರಿಕೆ ಅಗತ್ಯ. ಬಾಕಿ ಇರುವ ಎಲ್ಲರೂ ತಕ್ಷಣವೇ ಲಸಿಕೆ ಪಡೆಯಬೇಕು’ ಎಂದರು.

‘ಒಮಿಕ್ರಾನ್‌’ ಎಂಬ ಹೆಸರಿನ ಹೊಸ ತಳಿಯ ಕೊರೊನಾ ವೈರಾಣು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಈವರೆಗೂ ಹೊಸ ತಳಿಯ ವೈರಾಣು ಪತ್ತೆಯಾಗಿಲ್ಲ. ಈ ತಳಿಯ ವೈರಾಣು ಪತ್ತೆಯಾಗಿರುವ ದೇಶಗಳಿಂದ ರಾಜ್ಯಕ್ಕೆ ಬರುವವರು ಕೋವಿಡ್‌ ನೆಗೆಟಿವ್‌ ವರದಿ ಹೊಂದಿದ್ದರೂ ಪುನಃ ಆರ್‌ಟಿ–ಪಿಸಿಆರ್‌ ವಿಧಾನದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಧಾರವಾಡದ ಕಾಲೇಜು ಸಮಾರಂಭದಲ್ಲಿ ಪಾಲ್ಗೊಂಡವರಿಗೆ ಕೋವಿಡ್‌ ಸೋಂಕು ತಗುಲಿದೆ. 2,000 ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಿದ್ದು, 281 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ ಹಲವು ವಿದ್ಯಾರ್ಥಿಗಳ ಪರೀಕ್ಷಾ ವರದಿಗಳು ಬರಬೇಕಿದೆ ಎಂದರು.

ಔಷಧಿ ಖರೀದಿಗಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ₹ 38 ಕೋಟಿ ಬಿಡುಗಡೆ ಮಾಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಕುರಿತ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ಇದ್ದ ಕಾರಣ ಕೆಲವು ಔಷಧಿಗಳ ಖರೀದಿ ವಿಳಂಬವಾಗಿದೆ. ಆದರೆ, ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT