ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: ರಾಜ್ಯ: 2.5 ಲಕ್ಷದತ್ತ ಸೋಂಕಿತರ ಸಂಖ್ಯೆ

ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿದ ಪರಿಣಾಮ; ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ
Last Updated 19 ಆಗಸ್ಟ್ 2020, 18:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 8,642 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,49,590ಕ್ಕೆ ತಲುಪಿದೆ.

ಒಂದೇ ದಿನ 30,399 ಆ್ಯಂಟಿಜೆನ್ ಸೇರಿದಂತೆ 63,085 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ ಒಂದು ದಿನದ ಅವಧಿಯಲ್ಲಿ ನಡೆಸಲಾದ ಗರಿಷ್ಠ ಪರೀಕ್ಷೆಗಳು ಇವಾಗಿವೆ.

ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿರುವ ಪರಿಣಾಮ ಪ್ರಕರಣಗಳು ಏರಿಕೆ ಕಾಣುತ್ತಿದ್ದು, 48 ಗಂಟೆಗಳಲ್ಲಿ 16,307 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಕೊರೊನಾ ಸೋಂಕಿತರಲ್ಲಿ ಮತ್ತೆ 126 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 4,327ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 2,549 ಮಂದಿ ಸೇರಿದಂತೆ ರಾಜ್ಯದಲ್ಲಿ 7,201 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ 1.64 ಲಕ್ಷ ದಾಟಿದ್ದು, 80 ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅತೀ ಹೆಚ್ಚು ಕೋವಿಡ್ ಸಕ್ರಿಯ‌ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಹೊಸದಾಗಿ 2,804 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 96 ಸಾವಿರ ದಾಟಿದೆ. ಶಿವಮೊಗ್ಗದಲ್ಲಿ 915 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಬಳ್ಳಾರಿ ಹಾಗೂ ಮೈಸೂರಿನಲ್ಲಿ ಕೂಡ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಅಲ್ಲಿ ಮತ್ತೆ 500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ (379), ಉಡುಪಿ (375), ಧಾರವಾಡ (253), ದಕ್ಷಿಣ ಕನ್ನಡ (234), ದಾವಣಗೆರೆ (228), ಹಾಸನ (228) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ಬುಧವಾರ ದೃಢಪಟ್ಟ ಮರಣಪ್ರಕರಣಗಳಲ್ಲಿ 27 ಮಂದಿ 50 ವರ್ಷದ ಒಳಗಿನವರಾಗಿದ್ದಾರೆ. ಬೆಂಗಳೂರು (56), ಬಳ್ಳಾರಿ (9), ಧಾರವಾಡ (9), ಕೊಪ್ಪಳ (8) ಜಿಲ್ಲೆಯಲ್ಲಿ ಅಧಿಕ ಮಂದಿ ಮೃತಪಟ್ಟಿದ್ದಾರೆ.

‘ವೃದ್ಧರು,ಕಾಯಿಲೆಗಳಿರುವವರುಮುನ್ನೆಚ್ಚರಿಕೆ ವಹಿಸಬೇಕು’
ವೃದ್ಧರು ಹಾಗೂ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ದೀರ್ಘಕಾಲಿನ ಕಾಯಿಲೆಗಳಿರುವವರಿಗೆ ಕೋವಿಡ್ ಹೆಚ್ಚಿನ ಅಪಾಯ ಉಂಟು ಮಾಡುವ ಸಾಧ್ಯತೆಯಿದೆ. ಹಾಗಾಗಿ ಅಂತಹವರು ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ರಾಜ್ಯದಲ್ಲಿ ಈವರೆಗೆ ಕೋವಿಡ್‌ಗೆ ಮೃತಪಟ್ಟವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರೇ ಆಗಿದ್ದಾರೆ. ಈ ವರ್ಗದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿತರಾದಲ್ಲಿ ಅಸ್ವಸ್ಥರಾಗುವ ಸಾಧ್ಯತೆ ಇರಲಿದೆ. 55 ವರ್ಷ ಮೇಲ್ಪಟ್ಟವರು ಅನಿವಾರ್ಯತೆ ಇದ್ದಲ್ಲಿ ಮಾತ್ರ ಅಗತ್ಯ ಸುರಕ್ಷತೆಯೊಂದಿಗೆ ಹೊರಗಡೆ ಹೋಗಬೇಕು. ಸದ್ಯ ಪಡೆಯುತ್ತಿರುವ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸಬೇಕು. ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಪಡುವುದಿದ್ದರೆ ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳವರೆಗೆ ಮುಂದೂಡಬೇಕು ಎಂದು ಇಲಾಖೆ ತಿಳಿಸಿದೆ.

ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸಬೇಕು. ನೀರು ಮತ್ತು ತಾಜಾ ಹಣ್ಣಿನ ರಸವನ್ನು ಆಗಾಗ ಕುಡಿಯಬೇಕು. ಆರಾಮದಾಯಕವಾಗಿ ನಿದ್ದೆ ಮಾಡುವ ಕ್ರಮವನ್ನು ಅಭ್ಯಸಿಸಿಕೊಳ್ಳಬೇಕು. ಕೋವಿಡ್‌ನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಸ್ವಚಿಕಿತ್ಸೆಗೆ ಒಳಪಡದೇ, ತಕ್ಷಣ ವೈದ್ಯರನ್ನು ಕಾಣಬೇಕು. ವ್ಯಾಯಾಮ ಮತ್ತು ಯೋಗವನ್ನು ಮಾಡುವ ಮೂಲಕ ಶಾರೀರಿಕ ಮತ್ತು ಮಾನಸಿಕ ಸ್ಥಿತಿಯನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿದೆ.

ಆನ್‌ಲೈನ್‌ನಲ್ಲೇ ಪರೀಕ್ಷಾ ವರದಿ
ಕೋವಿಡ್‌ ಪರೀಕ್ಷೆಗೆ ಒಳಪಟ್ಟವರು ಇನ್ನು ಮುಂದೆ ತಮ್ಮ ಎಸ್‌ಆರ್‌ಎಫ್‌ ಗುರುತಿನ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲೇ ಪರೀಕ್ಷಾ ವರದಿಯನ್ನು ಪಡೆದುಕೊಳ್ಳಬಹುದು.

ಸರ್ಕಾರವು ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಪರೀಕ್ಷೆಗೆ ಒಳಪಟ್ಟ ಎಲ್ಲರೂ ತಮ್ಮ ವರದಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಇಷ್ಟು ದಿನ ಕೊರೊನಾ ಸೋಂಕು ದೃಢಪಟ್ಟವರ ಮೊಬೈಲ್‌ ಸಂಖ್ಯೆಗಳಿಗೆ ಸಂದೇಶ ಕಳುಹಿಸಲಾಗುತ್ತಿತ್ತು. ಕೋವಿಡ್‌ ಪರೀಕ್ಷೆಯ ವರದಿ ಬರುವವರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ಸೂಚಿಸಿರುವ ಆರೋಗ್ಯ ಇಲಾಖೆ, ತುರ್ತು ಸಂದರ್ಭದಲ್ಲಿ 108ಕ್ಕೆ ಕರೆ ಮಾಡುವಂತೆ ತಿಳಿಸಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ಮಾಹಿತಿಗೆ ಆಪ್ತಮಿತ್ರ ಸಂಖ್ಯೆ 14410ಕ್ಕೆ ಸಂಪರ್ಕಿಸುವಂತೆ ಇಲಾಖೆ ಸೂಚಿಸಿದೆ.

ಕೋವಿಡ್‌ ಪರೀಕ್ಷೆ ಫಲಿತಾಂಶ ವೀಕ್ಷಿಸುವ ವೆಬ್‌ ಪೋರ್ಟಲ್ ವಿಳಾಸ:https://www.covidwar.karnataka.gov.in/service1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT