ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೆ 2ನೇ ಅಲೆಯ ಕರಿಛಾಯೆ

ಕೋವಿಡ್: ಲಾಕ್‌ಡೌನ್‌ನಿಂದ ತತ್ತರ l ಇನ್ನೂ ಬಾಗಿಲು ತೆರೆಯದ ಶೇ 40ರಷ್ಟು ಕಾರ್ಖಾನೆಗಳು l ಕಾರ್ಮಿಕರ ಕೊರತೆಯ ಸವಾಲು
Last Updated 29 ಮಾರ್ಚ್ 2021, 2:04 IST
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್ ಸಿಟಿ, ಐ.ಟಿ ರಾಜಧಾನಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ಅದಕ್ಕೂ ಮುನ್ನವೇ ಗಾರ್ಮೆಂಟ್ಸ್‌ ಕಾರ್ಖಾನೆಗಳ ಹಬ್‌ ಎಂದೇ ಹೆಸರುವಾಸಿಯಾಗಿತ್ತು. ಈ ಉದ್ದಿಮೆಗಳು ಕಳೆದ ಒಂದು ವರ್ಷದಿಂದ ಕಲ್ಲುಮುಳ್ಳಿನ ಹಾದಿ ಸವೆಸಿ ಚೇತರಿಕೆಯ ಹಾದಿಗೆ ಮರಳಿವೆ. ಹೊಸ ಸವಾಲುಗಳನ್ನೂ ಎದುರಿಸಿ ಮುನ್ನಡೆಯುತ್ತಿರುವ ಈ ಉದ್ದಿಮೆಗಳ ಮೇಲೆ ಕೋವಿಡ್‌ ಎರಡನೇ ಅಲೆಯ ಕರಿಛಾಯೆ ವಕ್ಕರಿಸಿದೆ.

ಸಿದ್ಧ ಉಡುಪು ಅಥವಾ ಬ್ರ್ಯಾಂಡೆಡ್ ಉಡುಪು ತಯಾರಿಕೆಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ಬೆಂಗಳೂರಿನ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಸಿದ್ಧವಾಗುವ ಬಹುತೇಕ ಉಡುಪುಗಳು ಭಾರತದಲ್ಲಿ ಮಾರಾಟ ಆಗುವುದಿಲ್ಲ, ಅಮೆರಿಕ ಮತ್ತು ಯೂರೋಪ್‌ನಂತಹ ದೇಶಗಳಿಗೆ ರಫ್ತಾಗುತ್ತದೆ. ವಿದೇಶಿ ಬೇಡಿಕೆ ಆಧರಿಸಿಯೇ ಇಲ್ಲಿನ ಉದ್ಯಮಗಳು ನಡೆಯುತ್ತವೆ.

ಉಡುಪು ಸಿದ್ಧಪಡಿಸಿ ವಿದೇಶಗಳಿಗೆ ರಫ್ತು ಮಾಡುವ ಒಂದೊಂದು ಕಂಪನಿಗಳಲ್ಲಿ 1 ಸಾವಿರದಿಂದ 5 ಸಾವಿರದವರೆಗೆ ಕಾರ್ಮಿಕರಿದ್ದಾರೆ. 25 ರಿಂದ 100, 500 ಹೊಲಿಗೆ ಯಂತ್ರಗಳನ್ನು ಹೊಂದಿರುವ ಸಣ್ಣ ಸಣ್ಣ ಗಾರ್ಮೆಂಟ್ಸ್‌ ಕಾರ್ಖಾನೆಗಳೂ ಬೆಂಗಳೂರಿನಲ್ಲಿವೆ. ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ ಅನೇಕರು, ಇನ್ನೊಬ್ಬರ ಕೈಕೆಳಗೆ ದುಡಿಯುವ ಬದಲು ತಮ್ಮದೇ ಸ್ವಂತ ಸಣ್ಣ ಸಣ್ಣ ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಆರಂಭಿಸಿದ ಅನೇಕ ಉದಾಹರಣೆಗಳಿವೆ.

ಕೋವಿಡ್ ಆಕ್ರಮಣ ಈ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಎರಡು ತಿಂಗಳ ಲಾಕ್‌ಡೌನ್ ವೇಳೆ ಈ ಉದ್ಯಮ ತಲ್ಲಣಗೊಂಡಿತು. ಲಾಖ್‌ಡೌನ್‌ ತೆರವಾದ ಬಳಿಕವೂ ಈ ಉದ್ದಿಮೆ ಚೇತರಿಸಿಕೊಳ್ಳಲು ತಡಬಡಾಯಿಸಿತು. ಶೇ 30ರಿಂದ ಶೇ 40ರಷ್ಟು ಗಾರ್ಮೆಂಟ್ಸ್‌ ಕಾರ್ಖಾನೆಗಳು ಈಗಲೂ ಬಾಗಿಲು ತೆರೆದಿಲ್ಲ. ಬಾಗಿಲು ಮುಚ್ಚಿರುವ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಬಹುತೇಕವು ಸಣ್ಣ ಉದ್ದಿಮೆಗಳೇ ಆಗಿವೆ.

ಲಾಕ್‌ಡೌನ್ ತೆರವಾದ ಬಳಿಕವೂ ಉದ್ದಿಮೆ ಪುನರಾರಂಭ ಮಾಡಲು ಹಲವಾರು ತೊಡಕುಗಳು ಎದುರಾದವು. ಬಾಕಿ ಇದ್ದ ವಿದ್ಯುತ್ ಬಿಲ್, ಕಟ್ಟಡದ ಬಾಡಿಗೆ, ಈ ಹಿಂದೆ ಖರೀದಿಸಿದ್ದ ಕಚ್ಚಾ ವಸ್ತುಗಳ, ಬಿಡಿಭಾಗಗಳ ಪೂರೈಕೆದಾರರಿಗೆ ಪಾವತಿ ಬಾಕಿ... ಅಲ್ಲದೇ ಲಾಕ್‌ಡೌನ್‌ ಅವಧಿಯಲ್ಲಿ ಅನುಭವಿಸಿದ ನಾನಾ ರೀತಿಯ ನಷ್ಟಗಳನ್ನು ಭರಿಸಲು ಹಣ ಹೊಂದಿಸುವುದು ಸಣ್ಣ ಸಣ್ಣ ಉದ್ಯಮಿಗಳಿಗೆ ಕಷ್ಟವಾಯಿತು. ದಿನಗಳು ಉರುಳಿದಂತೆ ಸಾಲದ ಹಾಗೂ ಬಾಕಿಯ ಮೊತ್ತ ಹೆಚ್ಚಾಗುತ್ತಲೇ ಹೋಯಿತು. ಮತ್ತೆ ಬಂಡವಾಳ ಹಾಕಿದರೂ ಉಡುಪು ಸಿದ್ಧಪಡಿಸಲು ಬೇಡಿಕೆ ಬರುವ ಖಾತ್ರಿಯೂ ಇರಲಿಲ್ಲ.ಕೆಲವು ಕಟ್ಟಡಗಳ ಮಾಲೀಕರು ಒಳಗಿರುವ ಹೊಲಿಗೆ ಯಂತ್ರಗಳನ್ನು ಬಾಡಿಗೆ ಮೊತ್ತಕ್ಕೆ ಜಮಾ ಮಾಡಿಕೊಂಡು ಹೊಸದಾಗಿ ಬಾಡಿಗೆಗೆ ಕೊಟ್ಟಿದ್ದಾರೆ. ಹೀಗಾಗಿ, ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಮತ್ತೆ ತೆರೆಯುವ ಗೋಜಿಗೇ ಹೋಗಲಿಲ್ಲ ಎನ್ನುತ್ತಾರೆ ಬಾಗಿಲು ಮುಚ್ಚಿರುವ ಗಾರ್ಮೆಂಟ್ಸ್ ಕಾರ್ಖಾನೆಗಳ ಮಾಲೀಕರು.

ಈಗ ಈ ಉದ್ಯಮ ಚೇತರಿಕೆಯ ಹಾದಿಯಲ್ಲಿದೆ. ಇರುವ ಎಲ್ಲಾ ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೂ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಿದ್ಧ ಉಡುಪು ತಯಾರಿಕೆಗೆ ಬೇಡಿಕೆ ಬರುತ್ತಿದೆ. ಇದು ಉದ್ಯಮದಲ್ಲಿ ಹೊಸ ಉತ್ಸಾಹ ತುಂಬಿದೆ. ಆದರೆ, ಕೋವಿಡ್ ಎರಡನೇ ಅಲೆಯಿಂದ ಸರ್ಕಾರ ಮತ್ತೆ ಲಾಕ್‌ಡೌನ್ ಮಾಡಬಹುದು ಎಂಬ ಭೀತಿ ಉದ್ಯಮಿಗಳಲ್ಲಿ ಕಳವಳ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT