ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಾತ್ರಿ ಕರ್ಫ್ಯೂ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಓಡಾಟ ನಿಷಿದ್ಧ

ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಸಾರ್ವಜನಿಕರ ಓಡಾಟ ನಿಷಿದ್ಧ l ಅಗತ್ಯ ಸೇವೆಗಳಿಗೆ ಅವಕಾಶ
Last Updated 26 ಡಿಸೆಂಬರ್ 2021, 20:11 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಡಿಸೆಂಬರ್‌ 28ರಿಂದ (ಮಂಗಳವಾರ) 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸಭೆ
ಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು. ನಂತರ ರಾತ್ರಿ ಕರ್ಫ್ಯೂ ಜಾರಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ಮಂಗಳವಾರದಿಂದ ರಾತ್ರಿ 10ರ ಬಳಿಕ ಸಾರ್ವಜನಿಕ ಸಾರಿಗೆ ಸೇವೆ ಹೊರತುಪಡಿಸಿ ಇತರ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. 2022ರ ಜನವರಿ 7ರವರೆಗೂ ಈ ನಿರ್ಬಂಧ ಜಾರಿಯಲ್ಲಿರಲಿದೆ. ರಾತ್ರಿ
ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು, ವಿವಿಧ ನಗರಗಳ ಪೊಲೀಸ್‌ ಕಮಿಷನರ್‌ಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

2020ರ ಮಾರ್ಚ್‌ನಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಆಗ ಲಾಕ್‌ಡೌನ್‌ ಸಡಿಲಿಕೆ ಸಮಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಅಂದಿನಿಂದ 2021ರ ನವೆಂಬರ್‌ ಮೊದಲ ವಾರದವರೆಗೂ ಬಹುತೇಕ ದಿನಗಳಲ್ಲಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಆದೇಶ ಜಾರಿಯಲ್ಲಿತ್ತು. ಒಂದೂವರೆ ತಿಂಗಳಲ್ಲೇ ಮತ್ತೆ ರಾತ್ರಿ ಕರ್ಫ್ಯೂ ಆದೇಶ ಜಾರಿಗೆ ಬರುತ್ತಿದೆ.

ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್‌, ಕೋವಿಡ್‌ ಪ್ರಕರಣಗಳು, ಅದರಲ್ಲೂ ಓಮೈಕ್ರಾನ್‌ ತಳಿಯ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳ ಹೆಚ್ಚಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯ ಮಟ್ಟದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಅಭಿಪ್ರಾಯವನ್ನೂ ಪಡೆಯಲಾಯಿತು. ಆ ಬಳಿಕ ರಾತ್ರಿ ಕರ್ಫ್ಯೂ ಜಾರಿ ಮಾಡುವ ತೀರ್ಮಾನಕ್ಕೆ ಬರಲಾಯಿತು ಎಂದರು.

ಹತ್ತು ದಿನಗಳವರೆಗೂ ಇದೇ ಮಾರ್ಗಸೂಚಿ ಮುಂದುವರಿಯಲಿದೆ. ಸದ್ಯಕ್ಕೆ ಹೋಟೆಲ್‌, ರೆಸ್ಟೋರೆಂಟ್‌, ಕ್ಲಬ್‌ ಮತ್ತು ಪಬ್‌ಗಳಲ್ಲಿ ಮಾತ್ರ ಸಾಮರ್ಥ್ಯದ ಶೇ 50ರಷ್ಟು ಆಸನಗಳನ್ನು ಭರ್ತಿ ಮಾಡಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ಸದ್ಯಕ್ಕೆ ಈ ನಿರ್ಬಂಧ ಉಳಿದ ವಾಣಿಜ್ಯ ವಹಿವಾಟುಗಳಿಗೆ ಅನ್ವಯವಾಗುವುದಿಲ್ಲ. ಜ.7 ಕ್ಕೆ ಪರಿಸ್ಥಿತಿ ಅವಲೋಕಿಸಿದ ಬಳಿಕ ಆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಓಮೈಕ್ರಾನ್‌ ತಳಿಯ ಕೊರೊನಾ ವೈರಾಣು ಸೋಂಕು ವೇಗವಾಗಿ ಹರಡುತ್ತಿದೆ. ರಾಜ್ಯದಲ್ಲೇ 38 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು 400 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌ ನಿಯಂತ್ರಿಸಲು ಬಿಗಿಯಾದ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ ಎಂದರು.

ಪರಿಸ್ಥಿತಿ ನಿಯಂತ್ರಣಕ್ಕೆ ಸಜ್ಜು: ಮುಂದಿನ ದಿನಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಲಸಿಕೆ ನೀಡುವುದನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಈಗ ರಾಜ್ಯದ ಶೇ 97ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ 75ರಷ್ಟು ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 45 ಲಕ್ಷ ಮಂದಿ ಎರಡನೇ ಡೋಸ್‌ ಲಸಿಕೆ ಪಡೆಯುವುದು ಬಾಕಿ ಇದೆ. ಎಲ್ಲರಿಗೂ ತ್ವರಿತವಾಗಿ ಲಸಿಕೆ ನೀಡಲು ಸೂಚಿಸಲಾಗಿದೆ ಎಂದರು.

ಕಂದಾಯ ಸಚಿವ ಆರ್‌. ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಗಡಿಯಲ್ಲಿ ಕಟ್ಟೆಚ್ಚರ: ಕೊರೊನಾ ವೈರಾಣು, ಅದರಲ್ಲೂ ಓಮೈಕ್ರಾನ್‌ ತಳಿಯ ವೈರಾಣುವಿನ ಸೋಂಕು ಹರಡದಂತೆ ತಡೆಯಲು ಕೇರಳ ಮತ್ತು ಮಹಾರಾಷ್ಟ್ರಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಆದೇಶದಲ್ಲಿ ಸೂಚಿಸಿದ್ದಾರೆ.

ಯಾವುದಕ್ಕೆಲ್ಲ ನಿರ್ಬಂಧ?

* ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಅಗತ್ಯ ಸೇವೆಗಳ ಉದ್ದೇಶದ ಹೊರತಾಗಿ ಸಾರ್ವಜನಿಕರ ಓಡಾಟ ನಿಷಿದ್ಧ. ಹೋಟೆಲ್‌, ರೆಸ್ಟೋರೆಂಟ್‌, ಪಬ್‌ ಸೇರಿದಂತೆ ಎಲ್ಲ ಚಟುವಟಿಕೆಗಳೂ ರಾತ್ರಿ 10ಕ್ಕೆ ಅಂತ್ಯ.

ಯಾವುದಕ್ಕೆಲ್ಲ ಅವಕಾಶ?

* ಬಸ್‌, ರೈಲು, ಮೆಟ್ರೊ ರೈಲು ಮತ್ತು ವಿಮಾನ ಸೇರಿದಂತೆ ಎಲ್ಲ ಬಗೆಯ ಸಾರ್ವಜನಿಕ ಸಾರಿಗೆ ಸೇವೆಗೆ ಅವಕಾಶ. ಪ್ರಯಾಣಿಕರು ಟಿಕೆಟ್‌ ತೋರಿಸಿ ಬಸ್‌, ರೈಲು ಮತ್ತು ವಿಮಾನ ನಿಲ್ದಾಣ ತಲುಪಬಹುದು.

*ರೋಗಿಗಳು ಮತ್ತು ಅವರ ಸಹಾಯಕರು ಅಥವಾ ಜತೆಗಿರುವವರು ಚಿಕಿತ್ಸೆಯ ಉದ್ದೇಶಕ್ಕೆ ಪ್ರಯಾಣ ಮಾಡಲು ನಿರ್ಬಂಧಿಸುವಂತಿಲ್ಲ.

*ರಾತ್ರಿ ವೇಳೆ ಕೆಲಸ ಮಾಡಲೇಬೇಕಾದ ಕೈಗಾರಿಕೆಗಳು ಮತ್ತು ಕಂಪನಿಗಳಿಗೆ ನಿರ್ಬಂಧ ಅನ್ವಯವಾಗದು.ಇಂತಹ ಉದ್ದಿಮೆಗಳ ನೌಕರರು ಸಂಸ್ಥೆಯ ಗುರುತಿನ ಚೀಟಿ ಅಥವಾ ಅನುಮತಿ ಪತ್ರ ತೋರಿಸಿ ಓಡಾಡಬಹುದು.

*ಟೆಲಿಕಾಂ ಮತ್ತು ಇಂಟರ್‌ನೆಟ್‌ ಸೇವೆಗೆ ಸಂಬಂಧಿಸಿದ ಸಂಸ್ಥೆಗಳ ನೌಕರರು ಓಡಾಡಲು ಅವಕಾಶ.

*ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳಲ್ಲಿ ಅನಿವಾರ್ಯ ಎನಿಸಿದ ನೌಕರರು ಮಾತ್ರ ಕಚೇರಿಯಿಂದ ಕೆಲಸ ನಿರ್ವಹಿಸಬೇಕು. ಉಳಿದವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು.

*ವೈದ್ಯಕೀಯ, ತುರ್ತು ಸೇವೆಗಳು ಮತ್ತು ಔಷಧ ಉತ್ಪಾದನಾ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು. ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳೂ ನಿಷೇಧ.
*ಸರಕು ಸಾಗಣೆ, ಇ– ಕಾಮರ್ಸ್‌ ಕಂಪನಿಗಳಿಂದ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಸಂಪೂರ್ಣ ಅವಕಾಶ.

ಹೊಸ ವರ್ಷಾಚರಣೆಗೆ ನಿರ್ಬಂಧ

ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ನಿಷೇಧ ಮತ್ತು ಹೋಟೆಲ್‌, ರೆಸ್ಟೋರೆಂಟ್‌, ಪಬ್‌ ಮತ್ತು ಕ್ಲಬ್‌ಗಳಲ್ಲಿ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಭಾನುವಾರದ ಆದೇಶದಲ್ಲಿ ಮುಖ್ಯ ಕಾರ್ಯದರ್ಶಿ ಮತ್ತೊಮ್ಮೆ ನಿರ್ದೇಶನ ನೀಡಿದ್ದಾರೆ.

ಸಭೆ, ಸಮಾರಂಭಕ್ಕೆ 300 ಜನರ ಮಿತಿ

ಮದುವೆ ಸೇರಿದಂತೆ ಯಾವುದೇ ಸಭೆ, ಸಮಾರಂಭಗಳಿಗೆ ಸೇರಬಹುದಾದ ಜನಸಂಖ್ಯೆಯ ಮಿತಿಯನ್ನು 300ಕ್ಕೆ ಇಳಿಕೆ ಮಾಡಲಾಗಿದೆ.

9–12 ತಿಂಗಳ ನಡುವೆ ಮುನ್ನೆಚ್ಚರಿಕೆ ಡೋಸ್‌

ನವದೆಹಲಿ: ಕೋವಿಡ್‌–19 ತಡೆ ಲಸಿಕೆಯ ಎರಡನೇ ಡೋಸ್‌ ಪಡೆದುಕೊಂಡ ನಂತರದ 9 ತಿಂಗಳಿಂದ 12 ತಿಂಗಳ ಒಳಗೆ‘ಮುನ್ನೆಚ್ಚರಿಕೆ ಡೋಸ್‌’ ಅಥವಾ ಬೂಸ್ಟರ್‌ ಡೋಸ್‌ ಅನ್ನು ನೀಡುವ ಸಾಧ್ಯತೆ ಇದೆ.ಎರಡನೇ ಡೋಸ್‌ ಮತ್ತು ಮೂರನೇ ಡೋಸ್‌ ನಡುವಣ ಅಂತರ ಎಷ್ಟು ಇರಬೇಕು ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ಶೀಘ್ರ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT